ವಿಜಯಪುರ: ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಬಿಜೆಪಿ ಆಡಳಿತಾವಧಿಯಲ್ಲಿ ರೈತರಿಗೆ ನೀಡಲಾದ ನೋಟಿಸ್ ಸೇರಿದಂತೆ ಕೆಲವು ಮಹತ್ವದ ದಾಖಲೆ ಬಿಡುಗಡೆಗೊಳಿಸಿರುವ ಕಾಂಗ್ರೆಸ್, ಮೊದಲು ಈ ದಾಖಲೆಗಳಿಗೆ ಸಂಬಂಧಿಸಿದಂತೆ ನಿಮ್ಮ ನಿಲುವು ಸ್ಪಷ್ಟ ಪಡಿಸಿ ಇಲ್ಲವೇ ನೀವು ಮಾಡುತ್ತಿರುವುದು ನಾಟಕೀಯ ಬೆಳವಣಿಗೆ ಎಂಬುದನ್ನು ಒಪ್ಪಿಕೊಳ್ಳಬೇಕೆಂದು ಸವಾಲೆಸೆದಿದೆ.
ಈ ಹಿಂದಿನ ಬಿಜೆಪಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಸದಾನಂದ ಗೌಡ ಹಾಗೂ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಅನೇಕ ರೈತರಿಗೆ ನೋಟಿಸ್ ನೀಡಲಾಗಿದೆ. ವಿಜಯಪುರ ಜಿಲ್ಲೆಯೊಂದರಲ್ಲೇ 25-30 ನೋಟಿಸ್ ನೀಡಲಾಗಿದೆ. ಇದೀಗ ಗುಲ್ಲೆಬ್ಬಿಸುವ ಮುನ್ನ, ಅಹವಾಲು ಆಲಿಸುವ ಮುನ್ನ ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಬೇಕೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜು ಆಲಗೂರ ಆಗ್ರಹಿಸಿದರು.
ಬಿಜೆಪಿ ಆಡಳಿತಾವಧಿಯಲ್ಲಿ ವಕ್ಫ್‌ಗೆ ಎಷ್ಟು ರೈತರ, ಸಾರ್ವಜನಿಕರಿಗೆ ನೋಟಿಸ್ ನೀಡಿದ್ದಾರೆ? ವಕ್ಫ್ ಕಾಯ್ದೆಗೆ ಸಂಬಂಧಿಸಿದಂತೆ ಎಷ್ಟು ಗೆಜೆಟ್ ನೋಟಿಫಿಕೇಶನ್‌ಗಳನ್ನು ಹೊರಡಿಸಿದ್ದಾರೆ? ಬಿಜೆಪಿ ಆಡಳಿತಾವಧಿಯಲ್ಲಿ ಎಷ್ಟು ಆಸ್ತಿಯನ್ನು ರೈತರ, ಸಾರ್ವಜನಿಕರಿಂದ ವಕ್ಫ್ ಆಸ್ತಿ ಎಂದು ಮರಳಿ ಪಡೆದಿದ್ದಾರೆ? ವಕ್ಫ್ ಆಸ್ತಿ ಸಂರಕ್ಷಿಸಲು ಬಿಜೆಪಿ ಸರ್ಕಾರದ ಅವಧಿಗಳಲ್ಲಿ ಸಂಬಂಧಿತ ಮಂತ್ರಿಗಳು ಎಷ್ಟು ಸಭೆಗಳನ್ನು ನಡೆಸಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಬಿಜೆಪಿಯ ಅಹವಾಲು ಆಲಿಕೆ ಸಮಿತಿಯ ಸದಸ್ಯರು ಉತ್ತರಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, 2022 ಸೆ. 14ರಿಂದ 2022 ನ.18ರ ನಡುವಿನ ಅವಧಿಯಲ್ಲಿ ಆನಂದ ಚಂದ್ರಶೇಖರ ಹಡಪದ, ಗೋವಿಂದ ತಮ್ಮಣ್ಣಪ್ಪ ಲಿಂಗಸಾ, ಗಿರಿಮಲ್ಲಪ್ಪ ಶಿವಲಿಂಗಪ್ಪ ಚನ್ನಾಳ, ಎ. ಸಂಜಯಕುಮಾರ ಶಶಿಮಲ್ಲ ಜೈನ, ಮಹಾವೀರ ಶಂಕರಲಾಲ, ರವಿ ರಾಮಣ್ಣಮಾದರ, ಬಸವಪ್ಪ ಶಿದಪ್ಪ ಬಣಾರಿ,ಮಹಾಲಿಂಗಯ್ಯ ನಾಗಯ್ಯ ಹಿರೇಮಠ ಇವರುಗಳು ಯಾವ ಸಮುದಾಯಕ್ಕೆ ಸೇರಿದವರು? ಇವರಿಗೆ ನೋಟಿಸ್ ನೀಡಿದ ಅವಧಿಯಲ್ಲಿ ಯಾವ ಸರ್ಕಾರ ಆಡಳಿತದಲ್ಲಿ ಇತ್ತು? ಜಿಲ್ಲೆಗೆ ಅಹವಾಲು ಆಲಿಸಲು ಬಂದ ಬಿಜೆಪಿ ತಂಡದಲ್ಲಿರುವ ಸದಸ್ಯರು ನೋಟಿಸ್ ನೀಡಿದ ದಿನಾಂಕದಂದು ಯಾವ ಯಾವ ಹುದ್ದೆಯಲ್ಲಿದ್ದರು? ಆಗ ಅಧಿಕಾರ ಅನುಭವಿಸುತ್ತಿದ್ದ ಇವರು ಸುಮ್ಮನಿದ್ದರೇಕೆ? ಇವರು ಅಧಿಕಾರದಲ್ಲಿದ್ದಾಗ ಒಂದು ಕಾಯ್ದೆ ಅಧಿಕಾರದಲ್ಲಿ ಇಲ್ಲದಿದ್ದಾಗ ಒಂದು ಕಾಯ್ದೆಯೇ? ಎಂದು ಪ್ರಶ್ನಿಸಿದರು.
ಹಿಂದು -ಮುಸ್ಲಿಂ ಎಂದು ಭೇದ ಸೃಷ್ಠಿಸಿ ರಾಜಕೀಯ ಮಾಡುವುದು ಬಿಜೆಪಿಗರ ಚಾಳಿಯಾಗಿದೆ. ಈ ಹಿಂದೆ ಹಿಜಾಬ್, ಹಲಾಲ್, ಉರಿಗೌಡ-ನಂಜೇಗೌಡ ಪ್ರಕರಣಗಳನ್ನು ಸೃಷ್ಠಿಸಿ ರಾಜಕೀಯ ಮಾಡುತ್ತಿದ್ದರು. ಇದೀಗ ವಕ್ಫ್ ವಿವಾದ ಹುಟ್ಟು ಹಾಕುತ್ತಿದ್ದಾರೆ. ಕಾರಣ ಮಹಾರಾಷ್ಟ್ರ ಚುನಾವಣೆ ಹಾಗೂ ರಾಜ್ಯದ ಉಪ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ಈ ವಾಮ ಮಾರ್ಗ ಅನುಸರಿಸುತ್ತಿದ್ದಾರೆಂದು ಕಿಡಿ ಕಾರಿದರು.
ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, ಬಿಜೆಪಿಗರಿಗೆ ವಕ್ಫ್ ಬಗ್ಗೆ ಪರಿಪೂರ್ಣ ಜ್ಞಾನವೇ ಇಲ್ಲ. ಇವರಿಗೆ ಸಂವಿಧಾನದ ಬಗ್ಗೆ, ಕಾಯ್ದೆಗಳ ಬಗ್ಗೆ ಗೌರವವೇ ಇಲ್ಲ. ಇದ್ದಿದ್ದರೆ ಸಂವಿಧಾನ ಬದ್ಧ ವಕ್ಫ್ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡುತ್ತಿರಲಿಲ್ಲ ಎಂದರು.
ಯಾವ ರೀತಿ ಮುಜರಾಯಿ ಇಲಾಖೆ ಅಡಿ ಜಮೀನುಗಳಿವೆಯೋ ಅದೇ ರೀತಿ ವಕ್ಫ್‌ಗೂ ಜಮೀನುಗಳಿದ್ದವು. ಬಳಿಕ ಭೂ ಸುಧಾರಣೆ ಕಾಯ್ದೆ ತರುವಾಯ ಬಹುತೇಕ ಜಮೀನು ಊಳುವವರ ಹೆಸರಿಗೆ ಆಗಿವೆ. ಬಹಳ ವರ್ಷಗಳಿಂದ ವಕ್ಫ್ ದಾಖಲೆ ಸರಿಪಡಿಸಿರಲಿಲ್ಲ. ಇದೀಗ ಆ ಪ್ರಕ್ರಿಯೆ ನಡೆದಿದೆ. ಇದರಿಂದ ರೈತರಿಗೆ ಒಳ್ಳೆಯದೇ ಆಗಲಿದೆ. ಗೆಜೆಟ್‌ನಲ್ಲಿ ನಿಮ್ಮ ಆಸ್ತಿಯಲ್ಲಿ ವಕ್ಫ್ ಎಂದಿದ್ದು ಕೂಡಲೇ ನಿಮ್ಮ ಬಳಿಯ ದಾಖಲೆ ತಂದು ಸರಿಪಡಿಸಿಕೊಳ್ಳಿ ಎಂದಿದ್ದಾರೆ. ಹೀಗಾಗಿ ಗೊಂದಲ ಬೇಡ ಎಂದರು.
ಮುಸ್ಲಿಂರಿಗಾಗಿಯೇ ವಕ್ಫ್ ನ್ಯಾಯಾಧಿಕರಣ ಮಾಡಿದ್ದಾರೆ ಎಂಬ ವದಂತಿ ಹರಡುತ್ತಿದ್ದಾರೆ. ದೇಶದಲ್ಲಿ ಬಹಳಷ್ಟು ನ್ಯಾಯಾಧಿಕರಣಗಳಿದ್ದು ಅದೇ ರೀತಿ ವಕ್ಫ್‌ಗೂ ಇದೆ. ಆದಷ್ಟು ಬೇಗ ಪ್ರಕರಣಗಳು ಇತ್ಯರ್ಥವಾಗಲಿ ಎಂಬುದಷ್ಟೇ ಅದರ ಉದ್ದೇಶ ಎಂದರು.
ನೊಟೀಸ್ ನೀಡುವುದು ಆಡಳಿತ ವ್ಯವಸ್ಥೆಯ ನಿರಂತರ ಪ್ರಕ್ರಿಯೆ. ಹಾಗೆ ನೊಟೀಸ್ ಬಂದರೆ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಮಂತ್ರಿಗಳ ಬಳಿ ಹೋಗಬೇಕೋ ಅಥವಾ ಬಸನಗೌಡ ಪಾಟೀಲ ಯತ್ನಾಳ, ತೇಜಸ್ವಿ ಸೂರ್ಯ ಬಳಿ ಹೋಗಬೇಕೋ? ಅನ್ಯಾಯ ಆಗಿದ್ದರೆ ಹೋಗಲಿ ಆದರೆ ಇಲ್ಲಿ ಯಾವುದೇ ರೀತಿ ಅನ್ಯಾಯ ಆಗಿಲ್ಲ ಮತ್ತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಸಚಿವರು ಸ್ಪಷ್ಟನೆ ನೀಡಿದರೂ ತಂಡ ರಚಿಸಿ ರೈತರನ್ನು ಭೇಟಿ ಮಾಡುವುದರ ಹಿಂದಿನ ಉದ್ದೇಶವೇನು? ಎಂದರು.
ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಿಂದು- ಮುಸ್ಲಿಂ ವಿವಾದ ಸೃಷ್ಠಿಸುವುದನ್ನು ನಿಲ್ಲಿಸಿ. ಈಗಾಗಲೇ ರಾಜಕೀಯ ಲಾಭಕ್ಕಾಗಿ ಬಿಜೆಪಿಯಲ್ಲಿಯೇ ಒಳಜಗಳ ಆರಂಭಗೊಂಡಿದೆ. ಯತ್ನಾಳ ಹಾಗೂ ವಿಜಯೇಂದ್ರ ಬಣದ ನಡುವೆ ತಿಕ್ಕಾಟ ನಡೆದಿದೆ. ಇದರಿಂದಲೇ ಜನ ತಿಳಿದುಕೊಳ್ಳಬೇಕೆಂದರು.
ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ರೈತರ ವಿಷಯದಲ್ಲಿ ಜಾತಿ, ಧರ್ಮ ತಂದು ರಾಜಕೀಯ ಮಾಡಬೇಡಿ ಎಂದರು.
ಡಾ.ಗಂಗಾಧರ ಸಂಬಣ್ಣಿ ಮತ್ತಿತರರಿದ್ದರು.