ಜಿಲ್ಲೆ

ವಕ್ಫ್ ಆಸ್ತಿ ವಿವಾದ ವಿಚಾರ, ಬಿಜೆಪಿಯಿಂದ ತಂಡ ರಚನೆ, ಸ್ವಪಕ್ಷೀಯರ ಮೇಲೆಯೇ ಯತ್ನಾಳ ಆಕ್ರೋಶ

ವಿಜಯಪುರ: ರೈತರ ಪಹಣಿಯಲ್ಲಿ ವಕ್ಫ್ ಹೆಸರು ಉಲ್ಲೇಖಿಸಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ, ರೈತರ ಅಹವಾಲು ಆಲಿಸಲೆಂದು ಬಿಜೆಪಿ ರಚಿಸಿರುವ ವಿಶೇಷ ತಂಡದ ವಿರುದ್ಧವೇ ಅದೇ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಸಮಾಧಾನ ಹೊರಹಾಕಿದ್ದಾರೆ.

ಶಾಸಕ ಹರೀಶ ಪೂಂಜಾ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಎಂಎಲ್‌ಸಿ ಅರುಣ ಶಹಾಪುರ ಹಾಗೂ ಮುಖಂಡ ಕಲ್ಮರುಡಪ್ಪ ಅವರನ್ನೊಳಗೊಂಡ ಸಂಸದ ಗೋವಿಂದ ಕಾರಜೋಳ ನೇತೃತ್ವದ ತಂಡ ಅ. 29ರಂದು ವಿಜಯಪುರ ಭೇಟಿ ನೀಡುತ್ತಿರುವ ಹಿನ್ನೆಲೆ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯತ್ನಾಳ, ಅದೊಂದು ವಿಜಯೇಂದ್ರ ಟೀಮ್ ಎಂದು ಟೀಕಿಸಿದ್ದಾರೆ.

ಎಲ್ಲ ಮುಗಿದ ಮೇಲೆ ಟೀಂ ಮಾಡಿದ್ದಾರೆ. ಇದು ಕಾಟಾಚಾರಕ್ಕೆ ಮಾಡಿದ ಟೀಂ. ಹಾಗಾಗಿ ನಾನು ಮತ್ತು ಸ್ಥಳೀಯ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ ಎಂದರು.

ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಜಮೀರ್‌ಅಹ್ಮಧ್ ಖಾನ್‌ಗೆ 1,000 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಇದನ್ನು ನಾನು ಪ್ರಸ್ತಾಪಿಸಿ ವಿರೋಧ ಮಾಡಿದ್ದಕ್ಕೆ ಅದನ್ನು ವಾಪಸ್ ಪಡೆದರು. ಪೂಜ್ಯ ತಂದೆಯವರು ಜಮೀರ್‌ಗೆ ಸಾವಿರ ಕೋಟಿ ರೂಪಾಯಿ ಅನುದಾನ ನೀಡಿದ್ದರು. ಪೂಜ್ಯ ತಂದೆಯವರ ಕಿರಿಯ ಮಗ ಜಮೀರ್‌ಗೆ ಸಾವಿರ ಕೋಟಿ ರೂಪಾಯಿ ಅನುದಾನ ನೀಡಲು ಏನಾದರೂ ತೆಗೆದುಕೊಂಡಿರಬೇಕಲ್ಲ? ಎಂದು ವ್ಯಂಗ್ಯವಾಡಿದ ಯತ್ನಾಳ, ವಿಜಯೇಂದ್ರ ಇಂಥ ವ್ಯವಹಾರಗಳನ್ನು ಬಿಡಬೇಕು. ಇದು ನಿಜವಾಗಿ ಹೋರಾಟ ಮಾಡುವವರನ್ನು ತುಳಿದಂತಾಗುತ್ತದೆ. ನಾನು ಮಾಡುವ ಕಾರ್ಯಕ್ರಮವನ್ನೇ ವಿಜಯೇಂದ್ರ ತುಳಿದಂತಾಗುತ್ತದೆ. ಈ ಹಿಂದೆ ಪೂಜ್ಯ ತಂದೆಯವರು ಸಹ ಇದನ್ನೇ ಮಾಡಿದ್ದರು. ಪೂಜ್ಯ ತಂದೆಯವರ ಮಗನೂ ಅದನ್ನೇ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಯತ್ನಾಳ ಕಿಡಿ ಕಾರಿದರು.

ವಕ್ಫ್ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಕಳಕಳಿ ಇದ್ದರೆ ಇಷ್ಟು ದಿನ ಏಕೆ ಸಮಿತಿ ಮಾಡಲಿಲ್ಲ ಎಂದ ಯತ್ನಾಳ, ಇವರು ವಂಶ ಪಾರಂಪರೆ ಬೆಳೆಸುವುದನ್ನು ಬಿಟ್ಟರೆ ಏನೂ ಮಾಡಲ್ಲ. ಇದನ್ನ ರಾಷ್ಟ್ರೀಯ ನಾಯಕರು ಗಂಭೀರವಾಗಿ ತೆಗೆದುಕೊಳ್ಳಬೇಕು. ತಕ್ಷಣ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರನನ್ನು ವಜಾ ಮಾಡಬೇಕು. ಇಂಥ ಅಯೋಗ್ಯ ಅಧ್ಯಕ್ಷ ಕರ್ನಾಟಕಕ್ಕೆ ಬೇಕಿಲ್ಲ. ಎಲ್ಲ ವಿಷಯ ಮೇಲಿನವರಿಗೆ ಗೊತ್ತೇ ಇರುತ್ತದೆ. ಹೋರಾಟದ ವಿಚಾರದಲ್ಲಿ ಸಂಘ ಪರಿವಾರ ನಮ್ಮ ಹಿಂದೆ ಇದೆ ಎಂದರು.

ಈ ಹಿಂದೆ ವಿಧಾನ ಸಭೆಯಲ್ಲಿ ವಕ್ಫ್ ವಿಚಾರವಾಗಿ ಮಾತನಾಡಿದ್ದೇ ನಾನು. ಆಗ ಯಾರೊಬ್ಬರೂ ಮಾತನಾಡಲು ತಯಾರು ಇರಲಿಲ್ಲ. ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಬಸವರಾಜ್ ಬೊಮ್ಮಾಯಿ ನನ್ನನ್ನು ಕರೆಯಿಸಿ ವಕ್ಫ್ ಕುರಿತು ಮಾತನಾಡಲು ಹೇಳಿದರು. ಯಾರೂ ಮಾತನಾಡಲು ಸಿದ್ದರಿಲ್ಲದ ಕಾರಣ ನಾನೇ ದಾಖಲೆಗೆ ಸಹಿ ಮಾಡಿ ಮಾತನಾಡಿದೆ. ಹೀಗಾಗಿ ರಾಜ್ಯದಲ್ಲಿ ವಕ್ಫ್ ಕುರಿತು ಹೋರಾಟ ಆರಂಭಿಸಿದ್ದೇ ನಾನು ಎಂದರು.

ಸರ್ಕಾರಕ್ಕೆ ಗಡುವು

ಮುಂಬರುವ ನ. ಮೂರರ ಒಳಗೆ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದನ್ನು ತೆಗೆಯಬೇಕು. ಇಲ್ಲವಾದರೆ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಶಾಸಕ ಯತ್ನಾಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಈಗಾಗಲೇ ರೈತರಿಗೆ ಬಂದಿರುವ ನೋಟಿಸ್‌ಗಳ ಕುರಿತು ಪಹಣಿಯಲ್ಲಿ ನಮೂದಾಗಿರುವ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ. ವಿಜಯಪುರ ಜಿಲ್ಲೆಯಷ್ಟೆಲ್ಲ ಇತರ ಜಿಲ್ಲೆಗಳಿಂದಲೂ ರೈತರು ಮಾಹಿತಿ ನೀಡುತ್ತಿದ್ದಾರೆ. ಯಾದಗಿರಿ ಜಿಲ್ಲೆಯಲ್ಲೂ ಸಾವಿರಾರು ಎಕರೆ ಹೀಗಾಗಿದೆ. ಕಲಬುರಗಿ, ಬೀದರ್, ರಾಯಚೂರು, ಧಾರವಾಡ-ಹುಬ್ಬಳ್ಳಿಯಲ್ಲೂ ಮತ್ತು ಹಾವೇರಿಯ ಶಿಗ್ಗಾಂವಿ ಸವಣೂರಿನಲ್ಲಿಯೂ ಹೀಗೆ ಆಗಿದೆ. ಆದ್ದರಿಂದ ಕೂಡಲೇ ಸರ್ಕಾರ ಪಹಣಿಯಲ್ಲಿನ ವಕ್ಫ್ ಪದ ಸೇರ್ಪಡೆ ತೆಗೆಯಬೇಕೆಂದರು.