ಶಿವಮೊಗ್ಗದಲ್ಲಿ ರಹೀಂ ಖಾನ್ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಗುರುದತ್ತ ಹೆಗಡೆ, ಡಾ.ಕವಿತಾ ಯೋಗಪ್ಪನವರ್, ಬಲ್ಕಿಷ್ ಬಾನು, ಎಸ್.ರವಿಕುಮಾರ್ ಮುಂತಾದವರಿದ್ದರು. 
ಜಿಲ್ಲೆ

ಬೀದರ್‌ನಲ್ಲಿ ವಕ್ಫ್ ಆಸ್ತಿ ಕುಸಿತ: ರಹೀಂ ಖಾನ್ ಹೇಳಿಕೆ

ಅರವಿಂದ ಅಕ್ಲಾಪುರ

ಶಿವಮೊಗ್ಗ: ನನ್ನ ಸ್ವಂತ ಜಿಲ್ಲೆ ಬೀದರ್‌ನಲ್ಲಿ 70 ವರ್ಷದ ಹಿಂದೆ 400 ಎಕರೆ ವಕ್ಫ್ ಆಸ್ತಿಯಿತ್ತು. ಈಗ 10 ಎಕರೆಯೂ ಇಲ್ಲ. ಹೀಗಿರುವಾಗ ಹೊಸದಾಗಿ ವಕ್ಫ್‌ಗೆ ಭೂಮಿ ಸೇರಿಸಲಾಗುತ್ತಿದೆ ಎಂಬ ವಾದದಲ್ಲಿ ಹುರುಳಿಲ್ಲ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಹೇಳಿದರು.

ಈ ಬಾರಿ ಸಂಸತ್ ಅಧಿವೇಶನದಲ್ಲಿ ವಕ್ಫ್ ತಿದುಪಡಿ ಮಸೂದೆ ಅಂಗೀಕಾರವಾಗುವುದಿಲ್ಲ ಎಂಬುದು ನನ್ನ ಬಲವಾದ ನಂಬಿಕೆ. ಮಂಗಳವಾರ ವಕ್ಫ್ ತಿದ್ದುಪಡಿ ಬಿಲ್ ಮಂಡನೆ ಇದೆ. ಆದರೆ ಇದನ್ನು ಎನ್‌ಡಿಎ ಪಾಲುದಾರರಾದ ಬಿಹಾರದ ನಿತೀಶ್‌ಕುಮಾರ್ ಮತ್ತು ಆಂದ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರೇ ವಿರೋಧಿಸಲಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮುಸ್ಲಿಂ ಸಮುದಾಯದ ಶ್ರೀಮಂತರು, ವಾರಸುದಾರರು ಇಲ್ಲದವರು ಸಮಾಜಕ್ಕಾಗಿ ವಕ್ಫ್ ಮೂಲಕ ದಾನ ಮಾಡುತ್ತಾರೆ. ಆದರೆ ಬಿಜೆಪಿಯವರು ವಕ್ಫ್ ಭೂಮಿ ವಿಚಾರವನ್ನು ಸಮಾಜಕ್ಕೆ ತಪ್ಪಾಗಿ ವಿವರಿಸುತ್ತ ಜನರಲ್ಲಿ ಆತಂಕ ಮೂಡಿಸುತ್ತಿದ್ದಾರೆ

ಬಿಜೆಪಿಯವರಿಗೆ ಯಾವಾಗಲೂ ಚುನಾವಣೆಗೆ ಒಂದು ವಿಷಯ ಬೇಕು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರ ಹಲವು ದಶಕಗಳವರೆಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿತ್ತು. ಬಿಜೆಪಿಯವರು ಹಿಜಾಬ್ ಬಗ್ಗೆ ಮಾತನಾಡಿ ಕೋಲಾಹಲ ಸೃಷ್ಟಿಸಿದರು. ಮುಸ್ಲಿಂ ಆಹಾರ ಪದ್ಧತಿ ಬಗ್ಗೆಯೂ ಮಾತನಾಡಿದರು. ಈಗ ವಕ್ಫ್ ಬಗ್ಗೆ ಊಹಾಪೋಹ ಎಬ್ಬಿಸುತ್ತಿದ್ದಾರೆ ಎಂದು ದೂರಿದರು.