ಜಿಲ್ಲೆ

ರೈತರಿಗೆ ವಕ್ಫ ನೋಟಿಸ್,  ಜೆಪಿಸಿಗೆ ಮಾಹಿತಿ ನೀಡಿದ ಬೊಮ್ಮಾಯಿ

Dharwada - Basavaraj Idli

ಹುಬ್ಬಳ್ಳಿ: ರಾಜ್ಯದಲ್ಲಿ ವಕ್ಫ ಬೋರ್ಡ್ ನಿಂದ ರೈತರಿಗೆ ಆಗಿರುವ ಅನ್ಯಾಯದ ಕುರಿತು ಸಂಸತ್ತಿನ ಜಂಟಿ ಸದನ ಸಮಿತಿಯ ಗಮನಕ್ಕೆ ತಂದಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಗುರುವಾರ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ಅವರನ್ನು ಭೇಟಿ ಮಾಡಿ ಅಹವಾಲು ಸಲ್ಲಿಸಿದ್ದೇವೆ. ಹಾವೇರಿ ಜಿಲ್ಲೆಯ ಶಿಗ್ಗಾವಿ ಸವಣೂರು ಸೇರಿದಂತೆ ಎಲ್ಲ ತಾಲೂಕುಗಳಲ್ಲಿ ವಕ್ಫ ಬೋರ್ಡ್ ನಿಂದ ರೈತರು, ಆಸ್ಪತ್ರೆ, ಶಾಲೆ, ಕಾಗಿನೆಲೆ ಮಠಕ್ಕೆ ನೊಟೀಸ್ ಹೋಗಿದೆ. ಅಷ್ಟೇ ಅಲ್ಲ ಧಾರವಾಡ, ವಿಜಯಪುರ, ಕೊಪ್ಪಳ, ಗದಗ, ಹಳೇ ಮೈಸೂರು ಭಾಗದ ರೈತರಿಗೆ ನೋಟಿಸ್ ನೀಡಲಾಗಿದೆ. ವಕ್ಫ ಕಾಯಿದೆ ದುರ್ಬಳಕೆ ಮಾಡಿಕೊಂಡಿದ್ದರಿಂದ ಸಮಸ್ಯೆ ಉಲ್ಬಣಗೊಂಡಿದೆ ಎಂದರು.

ಇದೆಲ್ಲವನ್ನು ಸಮಿತಿ ಗಮನಕ್ಕೆ ತರಲಾಗಿದೆ. ಸಮಿತಿಯು ವಾಸ್ತವ ಏನಿದೆ ಎನ್ನುವುದನ್ನು ತನ್ನ ವರದಿಯಲ್ಲಿ ಪ್ರಸ್ತಾಪಿಸಿ ಕಾಯ್ದೆ ತಿದ್ದುಪಡಿಗೆ ಸಂಸತ್ತಿಗೆ ಸಲ್ಲಿಸಲಿದೆ ಎಂದು ಹೇಳಿದರು.

ವಕ್ಫ ಕಾಯಿದೆ ದುರುಪಯೋಗ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಉಂಟು ಮಾಡಲಾಗುತ್ತಿದೆ. ಕಾಯ್ದೆ ತಿದ್ದುಪಡಿಯಾಗುವ ಮೊದಲೇ ಸಾವಿರಾರು ಎಕರೆ ಭೂಮಿ ವಕ್ಫ ಹೆಸರಿಗೆ ಮಾಡುವ ಪ್ರಯತ್ನ ನಡೆದಿದೆ. ಇದೊಂದು ಸರ್ವಾಧಿಕಾರಿ ಧೋರಣೆ, ಸಮಾಜದಲ್ಲಿ ೋಭೆ ಉಂಟು ಮಾಡಿ, ರೈತ ಸಮುದಾಯದ ಮೇಲೆ ಪ್ರಹಾರ ಮಾಡಲಾಗುತ್ತಿದೆ. ಇವರು ಕ್ಷಮೆಗೆ ಅರ್ಹರಲ್ಲ ಎಂದರು.