ಉಡುಪಿ: ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಹಿಂದುಗಳನ್ನು ದಮನಿಸಲು ವಕ್ಫ್ ಬೋರ್ಡ್ ಬಳಕೆ ಮಾಡುತ್ತಿದೆ. ಹೀಗಾಗಿ ಬೀದಿಗಿಳಿದು ಹೋರಾಟ ಮಾಡಿದರೆ ಮಾತ್ರ ಹಿಂದುಗಳಿಗೆ ನೆಮ್ಮದಿಯ ಜೀವನ ಸಾಧ್ಯ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಜಿಲ್ಲಾ ಬಿಜೆಪಿ, ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ನಕಲಿ ಹಿಂದುಗಳಿಗೆ ತಕ್ಕಶಾಸ್ತಿ
ಲವ್ ಜಿಹಾದ್ ಬಳಿಕ ಲ್ಯಾಂಡ್ ಜಿಹಾದ್ ನಡೆಯುತ್ತಿದ್ದು, ಇವರನ್ನು ಬೆಂಬಲಿಸುವ ನಕಲಿ ಹಿಂದುಗಳ ಸೊಂಡ ಮುರಿದು ಬೀದಿಗೆ ತರಬೇಕು. ಇದರಿಂದ ಮಾತ್ರ ಹಿಂದುಗಳಿಗೆ ನ್ಯಾಯ ಸಿಗಲು ಸಾಧ್ಯ ಎಂದು ಆಕ್ರೋಶವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ಪ್ರಗತಿ ಪರಿಶೀಲನೆ ಹೆಸರಿನಲ್ಲಿ ಸಚಿವ ಜಮೀರ್ ದಲಿತರ, ರೈತರ, ಮಠ ಮಂದಿರಗಳ ಆಸ್ತಿಯಲ್ಲಿ ಪಹಣಿ ಬದಲಾವಣೆಗೆ ಮೌಖಿಕ ಆದೇಶ ನೀಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 19 ಎಕ್ರೆ ರೈತರ ಜಮೀನು ವಕ್ಫ ಬೋರ್ಡ್ಗೆ ಹೋಗಿದೆ. ಬಿಜೆಪಿ ಜನಹಿತಕ್ಕಾಗಿ ಹೋರಾಟ ಮಾಡುತ್ತಿದೆ. ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿನ ಆಸ್ತಿ ಕೊರತೆ ನೀಗಿಸಲು ಹಿಂದುಗಳ ಆಸ್ತಿಗೆ ಮೇಲೆ ಕಣ್ಣುಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಬಿಜೆಪಿ ಪ್ರ.ಕಾ. ರೇಶ್ಮಾ ಉದಯ್ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ, ನಗರಾಧ್ಯಕ್ಷ ದಿನೇಶ್ ಅಮೀನ್, ಮುಖಂಡರಾದ ಶಿಲ್ಪಾ ಸುವರ್ಣ, ರಾಜೀವ್ ಕುಲಾಲ್, ಸಂಧ್ಯಾ ರಮೇಶ್, ಯುವಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಬಿಜೆಪಿ ಕಾರ್ಯಕರ್ತರು ಮಣಿಪಾಲದ ಕಾಯಿನ್ ಸರ್ಕಲ್ ಬಳಿಯಿಂದ 'ಜಿಲ್ಲಾಧಿಕಾರಿಗಳ ಕಚೇರಿವರೆಗೆ 'ಬೃಹತ್ ಪ್ರತಿಭಟನಾ ನಡಿಗೆ' ನಡೆಯಿತು.