ಮಂಗಳೂರು: ನಗರದ ಎರಡು ಕಡೆ ಕಾಣಿಸಿಕೊಂಡ ಉಗ್ರ ಸಂಘಟನೆ ಪರ ಗೋಡೆ ಬರಹ ಪ್ರಕರಣದ ಆರೋಪಿಗಳಿಗೆ ವಿದೇಶದಿಂದ ವ್ಯಕ್ತಿಯೊಬ್ಬ ನಿರ್ದೇಶನ ನೀಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ನಿವಾಸಿಗಳಾದ ಮಹಮ್ಮದ್ ಶಾರೀಕ್ ಪ್ರಮುಖ ಆರೋಪಿ. ಈತನನ್ನು ವಿದೇಶದಿಂದ ಅಂತರ್ಜಾಲ ಬಳಸಿ ಕರೆ ಮಾಡುತ್ತಿದ್ದ ವ್ಯಕ್ತಿ, ರಾಜ್ಯ ಮಟ್ಟದಲ್ಲಿ ಗಮನ ಸೆಳೆದು ಸಂಚಲನ ಮೂಡಿಸಲು ಕರಾವಳಿ ಭಾಗದಲ್ಲಿ ಈ ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿದ್ದ. ಇದಕ್ಕೆ ಪೂರಕವಾಗಿ ಶಾರೀಕ್ ಯಾವ ರೀತಿಯ ಕೃತ್ಯ ನಡೆಸಬಹುದೆಂದು ಗೂಗಲ್, ಯೂಟ್ಯೂಬ್‌ಗಳಲ್ಲಿ ಹುಡುಕಾಡಿದ್ದಾನೆ. ಈ ಸಂದರ್ಭ ಗೋಡೆ ಬರಹದ ಮಾಹಿತಿ ಸಿಕ್ಕಿದ್ದು, ಅದೇ ರೀತಿ ಕೃತ್ಯಕ್ಕೆ ಮುಂದಾಗಿದ್ದ.
ನಿರ್ದೇಶನ ನೀಡಿದಾತ, ಕೃತ್ಯ ನಡೆಸಿದವರೆಲ್ಲರೂ ಪುಣೆಯ ಅಡ್ಮಿನ್ ಹೊಂದಿರುವ ವಾಟ್ಸಾೃಪ್ ಗ್ರೂಪ್‌ನಲ್ಲಿ ಸದಸ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೆಳೆಯನ ನಂಬಿ ಕೆಟ್ಟ: ಮಹಮ್ಮದ್ ಶಾರೀಕ್ ತೀರ್ಥಹಳ್ಳಿಯಲ್ಲಿ ಹಾಗೂ ಮಾಝ್ ಅಹ್ಮದ್ ಮಂಗಳೂರಿನಲ್ಲಿ ವಾಸವಿದ್ದರು. ಕೃತ್ಯದ ಬೆಳವಣಿಗೆ ಗಮನಿಸಲು ಮಾಝ್‌ಗೆ ಶಾರೀಕ್ ಜವಾಬ್ದಾರಿ ನೀಡಿದ್ದ. ಇಂಜಿನಿಯರಿಂಗ್ ಶಿಕ್ಷಣ ಪಡೆಯುತ್ತಿದ್ದ ಮಾಝ್ ಆರಂಭದಲ್ಲಿ ಒಪ್ಪಿರಲಿಲ್ಲ. ಊರಿನವನಾಗಿರುವ ಆತನನ್ನು ವಿಶ್ವಾಸಕ್ಕೆ ಪಡೆದು ಶಾರೀಕ್ ಒಪ್ಪಿಸಿದ್ದು, ನಂತರ ಇಬ್ಬರೂ ನ್ಯಾಯಾಲಯದ ಆವರಣದ ಬಳಿ ಗೋಡೆಯಲ್ಲಿ ಬರೆದು ಹೋಗಿದ್ದರು. ಅದನ್ನು ಸಾರ್ವಜನಿಕರು ಗಮನಿಸದ ಕಾರಣ ಬಿಜೈ ಬಳಿ ಆವರಣ ಗೋಡೆಯಲ್ಲಿ ಬರೆದಿದ್ದರು. ಕೃತ್ಯ ಬೆಳಕಿಗೆ ಬಂದು ದೊಡ್ಡ ಸುದ್ದಿಯಾದಾಗ ಮಾಝ್ ಆತಂಕಗೊಂಡು ಮನೆಯವರಿಗೂ ವಿಷಯ ತಿಳಿಸಿದ್ದ. ಗೆಳೆಯನ ಒತ್ತಾಯಕ್ಕೆ ಮಣಿದು ಈಗ ಜೈಲು ಪಾಲಾಗಿದ್ದಾನೆ.
ಕೇಂದ್ರ ಉಪವಿಭಾಗದ ಎಸಿಪಿ ಎಂ.ಜಗದೀಶ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಇನ್ನೋರ್ವ ಪೊಲೀಸರ ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇನ್ನೋರ್ವ ಆರೋಪಿ ತೀರ್ಥಹಳ್ಳಿಯ ಸಾದತ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಮಹಮ್ಮದ್ ಶಾರೀಕ್ (22) ಹಾಗೂ ಮಾಝ್ ಮುನೀರ್ ಅಹಮ್ಮದ್ (21) ಎಂಬವರನ್ನು ವಿಚಾರಣೆ ನಡೆಸಿದಾಗ ಕೃತ್ಯದಲ್ಲಿ ಇನ್ನೋರ್ವ ಭಾಗಿಯಾಗಿರುವ ಅಂಶ ಬೆಳಕಿಗೆ ಬಂದಿದೆ. ಆತನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಂಬಂಧಿಕನಾಗಿರುವ ಮಹಮ್ಮದ್ ಶಾರೀಕ್‌ಗೆ ಸಾದತ್ ಹಣದ ವ್ಯವಸ್ಥೆ ಮಾಡಿದ್ದ. ಪೊಲೀಸರಿಗೆ ಸಿಗದಂತೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಎನ್ನುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಇಂದು ನ್ಯಾಯಾಲಯಕ್ಕೆ: ಬಂಧಿತ ಇಬ್ಬರಿಗೆ ಕೋವಿಡ್ ನೆಗೆಟಿವ್ ವರದಿ ಬಂದಿದ್ದರೂ, ಆರೋಗ್ಯ ಇಲಾಖೆಯಿಂದ ಅಧಿಕೃತವಾಗಿ ವರದಿ ಬಾರದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಾಧ್ಯವಾಗಿಲ್ಲ. ಬುಧವಾರ ಮಧ್ಯಾಹ್ನದ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.