1) ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಪಿ.ಟಿ ಗ್ರಾಮದಲ್ಲಿ ದ್ಯಾಮಣ್ಣ ಗೋಡಿಕಾರ ಎಂಬುವರ ಮನೆ ಗೋಡೆ ಕುಸಿದು ಶೆಡ್ ಮೇಲೆ ಬಿದ್ದಿರುವುದು. 2) ಗೋಡೆ ಬಿದ್ದು ಗಾಯಗೊಂಡಿದ್ದ ಬಸಪ್ಪ ಗುಡದಿನ್ನಿಯನ್ನು ಸ್ಥಳೀಯರು ರಕ್ಷಣೆ ಮಾಡಿದರು. 
ಜಿಲ್ಲೆ

ಭಾರೀ ಮಳೆಗೆ ಗೋಡೆ ಕುಸಿತ : ಐವರು ಪ್ರಾಣಾಪಾಯದಿಂದ ಪಾರು

ಮುದ್ದೇಬಿಹಾಳ: ತಾಲೂಕಿನಲ್ಲಿ ಎರಡು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು, ಸಿದ್ದಾಪುರ ಪಿ.ಟಿ. ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮನೆಯ ಗೋಡೆ ಕುಸಿದು ಪಕ್ಕದಲ್ಲಿದ್ದ ಪತ್ರಾಸ್ ಶೆಡ್ ಮೇಲೆ ಬಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ದ್ಯಾಮಣ್ಣ ಗೋಡಿಕಾರ ಅವರ ಮನೆ ಗೋಡೆ ಭಾಗಶಃ ಕುಸಿದು ಪತ್ರಾಸ್ ಶೆಡ್ ಮೇಲೆ ಬಿದ್ದ ಪರಿಣಾಮ ಶೇಡ್‌ನಲ್ಲಿದ್ದ ಬಸಪ್ಪ ಗುಡದಿನ್ನಿ ಹಾಗೂ ಅಯ್ಯಮ್ಮ ಗುಡದಿನ್ನಿ ದಂಪತಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರ ಮಕ್ಕಳಾದ ಭೀಮವ್ವ, ರೂಪಾ, ಪ್ರಕಾಶ ಅವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ ಸಂದರ್ಭ ಆಸ್ಪತ್ರೆಗೆ ಭೇಟಿ ನೀಡಿದ ತಹಸೀಲ್ದಾರ್ ಬಿ.ಎಸ್. ಕಡಕಭಾವಿ ಅವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ನಿರೀಕ್ಷಕ ಡಿ.ಎಸ್. ತಳವಾರ (ಪವನ್), ಸಿದ್ದಾಪೂರ ಪಿ.ಟಿ ಗುಡದಿನ್ನಿ ದಂಪತಿ ಬಾಗಲಕೋಟೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು ಅವರು ಆಸ್ಪತ್ರೆಯ ಬಿಲ್‌ಗಳನ್ನು ಕಂದಾಯ ಇಲಾಖೆಗೆ ನೀಡಿದರೆ ಅವರಿಗೆ ಸರಕಾರದಿಂದ ಪರಿಹಾರ ದೊರಕಿಸಿಕೊಡಲಾಗುತ್ತದೆ. ಅಲ್ಲದೇ ಶೆಡ್ ಹಾಗೂ ಮನೆ ಬಿದ್ದಿರುವುದಕ್ಕೆ ಇಲಾಖೆಯ ನಿಯಮಾವಳಿಗಳನ್ವಯ ಪರಿಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಮಳೆಯಿಂದಾಗಿ ಬಸರಕೋಡದಿಂದ ಮಾದಿನಾಳ ಸಂಪರ್ಕಿಸುವ ರಸ್ತೆ ಜಲಾವತವಾಗಿ ಜನರ ಓಡಾಟಕ್ಕೆ ತೊಂದರೆಯುಂಟಾಯಿತು. ಅಲ್ಲದೇ ಯರಝರಿ ಗ್ರಾಮದೊಳಕ್ಕೆ ಮತ್ತೆ ಮಳೆ ನೀರು ಹಳ್ಳದೊಳಕ್ಕೆ ನುಗ್ಗುವ ಭೀತಿ ಜನರನ್ನು ಆವರಿಸಿದೆ. ಹಳ್ಳದ ಅಕ್ಕಪಕ್ಕದಲ್ಲಿದ್ದ ಮುಳ್ಳು ಕಂಟಿಗಳನ್ನು ತೆರವುಗೊಳಿಸುವ ಕಾರ್ಯ ಈವರೆಗೂ ಸಂಬಂಸಿದ ಇಲಾಖೆಯವರು ಮಾಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.