ಸಾಬು ಬ್ಯಾರಿ ಹೆಂಚಿನ ಛಾವಣಿಯ ಮನೆಯ ಹಿಂಭಾಗದ ಗೋಡೆ ಬುಧವಾರ ರಾತ್ರಿ ಕುಸಿದಿದೆ. 
ಜಿಲ್ಲೆ

ಕೆಯ್ಯೂರಿನಲ್ಲಿ ಗೋಡೆ ಕುಸಿತ: ನಿಡ್ಪಳ್ಳಿಯಲ್ಲಿ ಮರಬಿದ್ದು ಹಾನಿ

ಸೌಮ್ಯ ಆರ್

ಪುತ್ತೂರು ಗ್ರಾಮಾಂತರ: ಗಾಳಿ-ಮಳೆಗೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ಮನೆಯೊಂದರ ಗೋಡೆ ಕುಸಿದು ಮನೆಗೆ ಹಾನಿಯಾದ ಮತ್ತು ನಿಡ್ಪಳ್ಳಿ ಗ್ರಾಮದ ಮುಂಡೂರು ಎಂಬಲ್ಲಿ ಮನೆಯ ಮೇಲೆ ಮರವೊಂದು ಉರುಳಿಬಿದ್ದು ಮನೆಗೆ ಹಾನಿಯಾದ ಘಟನೆಗಳು ನಡೆದಿವೆ.

ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಮಾಡಾವು ಶಾಲಾ ಬಳಿಯ ನಿವಾಸಿ ಸಾಬು ಬ್ಯಾರಿ ಎಂಬುವರ ಹೆಂಚಿನ ಮನೆಯ ಹಿಂಭಾಗದ ಇಟ್ಟಿಗೆ ಗೋಡೆ ಬುಧವಾರ ರಾತ್ರಿ ಕುಸಿದು ಬಿದ್ದ ಪರಿಣಾಮ ವಿದ್ಯುತ್ ವ್ಯವಸ್ಥೆ ಹಾಗೂ ಸಾಮಾಗ್ರಿಗಳು ಹಾನಿಗೊಂಡಿವೆ. ಮನೆಮಂದಿ ಅಪಾಯದಿಂದ ಪಾರಾಗಿದ್ದಾರೆ.

ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಸದಸ್ಯ ಜಯಂತ ಪೂಜಾರಿ ಕೆಂಗುಡೇಲು, ಪಿಡಿಒ ನಮಿತಾ ಕೆ, ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಗ್ರಾಮ ಆಡಳಿತಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ನಾರಾಯಣ ಪಾಟಾಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಡ್ಪಳ್ಳಿ ಗ್ರಾಮದ ಮುಂಡೂರು ನಿವಾಸಿ ವಿಶ್ವೇಶ್ವರ ಭಟ್ ಎಂಬುವರ ಹೆಂಚಿನ ಮನೆಯ ಮೇಲೆ ಮರವೊಂದು ಉರುಳಿಬಿದ್ದು ಹಾನಿಗೊಂಡಿದೆ. ಗಾಳಿಯಿಂದಾಗಿ ಮನೆಯ ಪಕ್ಕದಲ್ಲಿದ್ದ ಮರ ಮನೆಯ ಮಾಡಿನ ಮೇಲೆ ಉರುಳಿ ಬಿದ್ದಿದ್ದು, ಪಕ್ಕಾಸು ಮತ್ತು ಹೆಂಚುಗಳು ಹಾನಿಗೊಂಡಿವೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸುನೀತಾ ಕೆ. ಮತ್ತು ಸಹಾಯಕಿ ಜಯಶ್ರೀ ಭೇಟಿ ನೀಡಿದ್ದಾರೆ.

ವಿಶ್ವೇಶ್ವರ ಭಟ್ ಹೆಂಚಿನ ಮನೆಯ ಮೇಲೆ ಮರ ಉರುಳಿಬಿದ್ದಿದೆ.