ಜಿಲ್ಲೆ

ಕಾಲ್ನಡಿಗೆ, ಯೋಗ, ಧ್ಯಾನದಿಂದ ದೀರ್ಘಾಯುಷ್ಯ

ಹರ್ಷ ನ.ಪುರೋಹಿತ

ಹೊನ್ನಾಳಿ: ನಿಯಮಿತವಾಗಿ ಕಾಲ್ನಡಿಗೆ, ಯೋಗ, ಧ್ಯಾನ ಮಾಡುವುದರಿಂದ ದೀರ್ಘಾಯುಷಿಗಳಾಗಿ ಬದುಕಬಹುದು ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಹಿರೇಕಲ್ಮಠದಲ್ಲಿ ಯುಗಾದಿ ಅಮಾವಾಸ್ಯೆ ಪ್ರಯುಕ್ತ ಆಯೋಜಿಸಿದ್ದ ಶ್ರೀ ಚನ್ನೇಶ್ವರ ಬೆಳ್ಳಿ ರಥೋತ್ಸವ ಮತ್ತು ಸಂಸ್ಕತಿ-ಸಂಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಆರೋಗ್ಯ ಚನ್ನಾಗಿದ್ದರೆ ಮತ್ತಷ್ಟು ಕೆಲಸಗಳನ್ನು ಮಾಡಲು ಪ್ರೇರಣೆ ಸಿಗುತ್ತದೆ. ಸಾಧನೆಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಠ-ಮಾನ್ಯಗಳಲ್ಲಿ ನಡೆಯುವ ಧಾರ್ಮಿಕ ಸಭೆ-ಸಮಾರಂಭಗಳಲ್ಲಿ ಜನ ಭಾಗವಹಿಸುವುದು ಕಡಿಮೆಯಾಗಿದೆ. ಟಿವಿ ಧಾರಾವಾಹಿಗಳ ವೀಕ್ಷಣೆಗೆ ಆದ್ಯತೆ ನೀಡಿ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳನ್ನು ತಂದುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರತಿ ವ್ಯಕ್ತಿಗೂ ದೈವದತ್ತವಾಗಿ ಸಾಧನೆಗೆ ಅವಕಾಶ ಒದಗಿಬರುತ್ತದೆ. ಆದರೆ, ಸಮಯ ಸದ್ಭಳಕೆ ಮಾಡಿಕೊಂಡರೆ ಮಾತ್ರ ಸಾಧಕರಾಗಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.

ಶ್ರೀ ಶೈಲಕ್ಕೆ ಕೈಗೊಂಡಿದ್ದ ಪಾದಯತ್ರೆ ಸಂದರ್ಭದಲ್ಲಿ ಮಳೆ-ಬೆಳೆ ಸಮೃದ್ಧಿಯಾಗಿ ರೈತರು ನೆಮ್ಮದಿ ಜೀವನ ನಡೆಸುವಂತಾಗಲೀ ಎಂದು ಬೇಡಿಕೊಂಡಿದ್ದೆ. ಲೋಕಕಲ್ಯಾಣಾರ್ಥ ಶ್ರೀಮಠದಿಂದ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದು, ಭಕ್ತರು ಕುಟುಂಬ ಸಮೇತ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಚನ್ನಪ್ಪಸ್ವಾಮಿ ವಿದ್ಯಾಪೀಠದ ಕಾರ್ಯದರ್ಶಿ ಚನ್ನಯ್ಯಬೆನ್ನೂರು ಮಠ ಮಾತನಾಡಿ, ಶಿಕ್ಷಣದ ಮಹತ್ವ ಅರಿತಿದ್ದ ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಪಿಯು, ಪದವಿ, ಐಟಿಐ, ಬಿ.ಇಡಿ. ಸೇರಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದರು. ಅದರ ಫಲವಾಗಿ ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಛಾಪು ಮೂಡಿಸಿದ್ದಾರೆ ಎಂದರು.

ಈಗಿನ ಶ್ರೀಗಳು ಲೋಕಕಲ್ಯಾಣಾರ್ಥ ಕಳೆದ 8 ವರ್ಷಗಳಿಂದ ಸುಮಾರು 750 ಕಿ.ಮೀ. ದೂರದ ಶ್ರೀ ಶೈಲಕ್ಕೆ ಭಕ್ತರೊಂದಿಗೆ ಪದಯತ್ರೆ ನಡೆಸುತ್ತಿದ್ದಾರೆ. ಈ ವರ್ಷ ಬಿಸಿಲಿನ ತೀವ್ರತೆ ಹೆಚ್ಚಿದ್ದರೂ ಆರೋಗ್ಯ ಲೆಕ್ಕಿಸದೆ ಪಾದಯಾತ್ರೆ ಮುಗಿಸಿ ಬಂದಿದ್ದಾರೆ ಎಂದರು.

ಹಿರೇಕಲ್ಮಠದ ವ್ಯವಸ್ಥಾಪಕ ಎಂ.ಪಿ.ಎಂ. ಚನ್ನಬಸಯ್ಯ ಮಾತನಾಡಿ, ಎಸ್.ಎಂ.ಎಸ್.ಎಫ್.ಸಿ. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಎಸ್. ಸಿಂಧೂಬಾಯಿ ದಾವಣಗೆರೆ ವಿಶ್ವವಿದ್ಯಾಲಯದ ಬಿ.ಎ. ಕಲಾ ವಿಭಾಗದಲ್ಲಿ ಪ್ರಥಮ ರ‌್ಯಾಂಕ್‌ನೊಂದಿಗೆ 3 ಗೋಲ್ಡ್ ಮೆಡಲ್ ಪಡೆದು ನಮ್ಮ ಸಂಸ್ಥೆಗೆ ಹೆಸರು ತಂದಿದ್ದಾರೆ. ಮುಂದೆ ಐಎಎಸ್ ಮಾಡುವ ಗುರಿ ಹೊಂದಿದ್ದು, ಅದಕ್ಕೆ ನಮ್ಮ ಶ್ರೀ ಚನ್ನಪ್ಪಸ್ವಾಮಿ ಜನಕಲ್ಯಾಣ ಟ್ರಸ್ಟ್ ವತಿಯಿಂದ ಆರ್ಥಿಕ ನೆರವು ನೀಡಲು ಶ್ರೀಗಳು ಮುಂದಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ವಿದ್ಯಾರ್ಥಿನಿ ಎಸ್. ಸಿಂಧೂಬಾಯಿ ಮಾತನಾಡಿ, ನಾನು ಪಿಯುಸಿಯಿಂದ ಮಠದ ಸಂಸ್ಥೆಗಳಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದೇನೆ. ಇಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿದ್ದು, ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಹೇಳಿದರು.

ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅವರನ್ನು ಚನ್ನೇಶ್ವರ ಗಾನಕಲಾ ಬಳಗದವರು ಮತ್ತು ಭಕ್ತರು ಸನ್ಮಾನಿಸಿದರು. ದಾವಣಗೆರೆ ವಿವಿ ಕಲಾ ವಿಭಾಗದಲ್ಲಿ ಪ್ರಥಮ ರ‌್ಯಾಂಕ್ ಮತ್ತು 3 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಎಸ್. ಸಿಂಧೂಬಾಯಿ ಅವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಕತಿ-ಸಂಸ್ಕಾರ ತಂಡದವರು ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಧರ್ಮಸಭೆಯಲ್ಲಿ ಮಠದ ಪ್ರಧಾನ ಅರ್ಚಕ ಅನ್ನದಾನಯ್ಯ ಶಾಸ್ತ್ರಿ, ನಿಜಗುಣಶಿವಯೋಗಿ ಶಾಸ್ತ್ರಿ, ರೇವಣಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.