ಹುಬ್ಬಳ್ಳಿ : ರೈತರ ಆಸ್ತಿಗಳ ಪಹಣಿಯಲ್ಲಿ ವಕ್ಪ್ ಹೆಸರನ್ನು 2019ರಲ್ಲಿಯೇ ಸೇರಿಸಲಾಗಿತ್ತು. ಇದರ ವಿರುದ್ಧ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕಂದಾಯ ಸಚಿವ ಪ್ರಭು ಚವ್ಹಾಣ ಸೇರಿದಂತೆ ಅನೇಕರಿಗೆ ಮನವಿ ನೀಡಿ, ಹಲವಾರು ಪ್ರತಿಭಟನೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ಕರ್ನಾಟಕ ಮುಲ್ಲಾ ಅಸೋಸಿಯೇಷನ್ ಧಾರವಾಡ ಜಿಲ್ಲಾ ಅಧ್ಯಕ್ಷ ಶಮೀಮ ಅಹ್ಮದ ಮುಲ್ಲಾ ದೂರಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆಸ್ತಿಗಳ ಪಹಣಿಯಲ್ಲಿ ವಕ್ಪ್ ಹೆಸರು ಸೇರಿದ್ದರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಿದ್ದೇವು. ಧಾರವಾಡ ಹಾಗೂ ಗದಗನಲ್ಲಿ ಪಾದಯಾತ್ರೆ ನಡೆಸಿ, ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಮ್ಮ ಹೋರಾಟಕ್ಕೆ ಬೆಂಬಲ ನೀಡದೇ ಮೌನ ತಾಳಿದ್ದರು ಎಂದು ಆರೋಪಿಸಿದರು.
ಇದೀಗ ರೈತರ ಪಹಣಿಯಲ್ಲಿರುವ ವಕ್ಪ್ ಹೆಸರು ತೆಗೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೂ ಬಿಜೆಪಿಯವರು ಹೋರಾಟದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.
2019ರಲ್ಲಿ ರೈತರ ಪಹಣಿಯಲ್ಲಿ ವಕ್ಪ್ ಹೆಸರು ಸೇರಿದ್ದಾಗ ಇದರ ವಿರುದ್ಧ ಚಕಾರ ಎತ್ತದ ಬಿಜೆಪಿ ಮುಖಂಡರು, ಇದೀಗ ಯಾವ ಉದ್ದೇಶದಿಂದ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರೈತರ ಪಹಣಿಯಲ್ಲಿನ ವಕ್ಪ್ ಹೆಸರು ತೆಗೆಯುವಂತೆ ಕರ್ನಾಟಕ ಮುಲ್ಲಾ ಅಸೋಸಿಯೇಷನ್ ಈಗಲೂ ಹೋರಾಟ ಮುಂದುವರೆಸಿದೆ. ಸರ್ಕಾರ ಬಿಜೆಪಿಯದ್ದೇ ಇರಲಿ ಅಥವಾ ಕಾಂಗ್ರೆಸ್ನದ್ದೇ ಇರಲಿ, ರೈತರ ಪಹಣಿಯಲ್ಲಿನ ವಕ್ಪ್ ಹೆಸರು ತೆಗೆಯಬೇಕು ಎಂದು ಆಗ್ರಹಿಸಿದರು.
ಅಸೋಸಿಯೇಷನ್ನ ಇಮ್ತಿಯಾಜ್ ಮುಲ್ಲಾ ಹಾಗೂ ಅಬ್ದುಲ್ರಜಾಕ್ ಮುಲ್ಲಾ ಹಾಜರಿದ್ದರು.