ವಕ್ಫ್ ಮಂಡಳಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ವಕೀಲ ಸಂಪತ್ತಕುಮಾರ ಶೆಟ್ಟಿ ಮಾತನಾಡಿದರು. ಹರಿಶಾಚಾರ್ಯ ಶಿರೂರ, ಶಿವಾನಂದ ಖೋತ, ಎಂ.ಸಿ.ತಾಂಬೋಳಿ ಇತರರಿದ್ದರು. 
ಜಿಲ್ಲೆ

ವಕ್ಫ್ ಮಂಡಳಿ ರದ್ದತಿಗೆ ಆಗ್ರಹ

ರಾಘವೇಂದ್ರಗೌಡ ಭೀ ಪಾಟೀಲ್

ಅಥಣಿ: ಅಥಣಿ ಮತ್ತು ಕಾಗವಾಡ ತಾಲೂಕಿನಾದ್ಯಂತ ರೈತರ ಅಂದಾಜು 1,660 ಎಕರೆ ಜಮೀನು ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದರೂ, ಸರ್ಕಾರ ಮೌನವಾಗಿರುವುದು ವಿಷಾದನೀಯ. ಕೂಡಲೇ ವಕ್ಫ್ ಮಂಡಳಿ ರದ್ದುಗೊಳಿಸಬೇಕು ಎಂದು ವಕೀಲ ಸಂಪತ್ತಕುಮಾರ ಶೆಟ್ಟಿ ಆಗ್ರಹಿಸಿದರು.

ಪಟ್ಟಣದಲ್ಲಿ ರೈತ ಸಂಘ, ಮಾಜಿ ಸೈನಿಕರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನೊಂದವರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಇರಲಿದೆ. 1985ರಲ್ಲಿ ಮೊದಲ ಬಾರಿ ಗೆಜೆಟ್ ಆಗಿ 1,560 ಎಕರೆ ಜಮೀನು ಹಾಗೂ 2019ರಲ್ಲಿ ಎರಡನೇ ಬಾರಿ ಗೆಜೆಟ್ ಆಗಿ 107 ಎಕರೆ ವಕ್ಫ್ ಜಮೀನು ಎಂದು ಘೋಷಣೆಯಾಗಿದೆ.

ಒಂದು ನೋಟಿಫಿಕೇಶನ್ ಹೊರಡಿಸಿ ರೈತರ ಆಸ್ತಿಯನ್ನು ತಮ್ಮದಾಗಿಸಿಕೊಳ್ಳುತ್ತಿರುವವರು ಅಗತ್ಯ ದಾಖಲಾತಿ ಒದಗಿಸಿಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನು ಹೋರಾಟ ಮಾಡಲಾಗುವುದು. ಈ ಮೊದಲು ಮಾಡಿದ ಎಲ್ಲ ನೋಟಿಫಿಕೇಶನ್‌ಗಳನ್ನು ವಾಪಸ್ ಪಡೆಯಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಹೋರಾಟಕ್ಕೆ ಸ್ಪಂದಿಸಿ ರೈತರ ತೊಂದರೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆ ಪಟ್ಟಣದ ಮುರುಘೇಂದ್ರ ಬ್ಯಾಂಕ್‌ದಿಂದ ಪ್ರಮುಖ ಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು. ಅಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ತಹಸೀಲ್ದಾರ್ ಸಿದರಾಯ ಭೋಸಗೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾ ಪ್ರಮುಖ ಹರಿಶಾಚಾರ್ಯ ಶಿರೂರ, ರೈತ ಮುಖಂಡರಾದ ಶಿವಾನಂದ ಖೋತ, ಎಂ.ಸಿ.ತಾಂಬೋಳಿ, ಇಮಗೌಡರ ಚಮಗೌಡರ, ಸಿದ್ದರಾಜ ಬೊರಾಡೆ, ಅಣಪ್ಪ ಭಜಂತ್ರಿ, ಪ್ರಶಾಂತ ತೊಡಕರ, ರವಿ ಸಂಕ, ವಕೀಲರಾದ ವಿನಯ ಪಾಟೀಲ, ಮಿಥೇಶ ಪಟ್ಟಣ ಇತರರು ಇದ್ದರು.