ವಿಜಯಪುರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಸುದ್ದಿಗೋಷ್ಠಿ ನಡೆಸಿದರು. ವಕೀಲ ಡಿ.ಜಿ. ಬಿರಾದಾರ, ಸಾಬು ಮಾಶ್ಯಾಳ, ಈರಣ್ಣ ರಾವೂರ ಮತ್ತಿತರರಿದ್ದಾರೆ.  
ಜಿಲ್ಲೆ

ದಂಗೆಗೂ ಮುನ್ನ ಎಚ್ಚೆತ್ತುಕೊಳ್ಳಿ....! ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ ಗೊತ್ತಾ?

ವಿಜಯಪುರ: ಹಿಂದುಗಳನ್ನು ಇಬ್ಭಾಗ ಮಾಡಲು ಹೋಗಿ ಕೈ ಸುಟ್ಟುಕೊಂಡಿರುವ ಸಚಿವ ಎಂ.ಬಿ. ಪಾಟೀಲರು ಮತ್ತದೇ ಧೋರಣೆ ಮುಂದುವರಿಸಿದರೆ ಹಳ್ಳಿ-ಹಳ್ಳಿಗಳಲ್ಲಿ ಜನ ದಂಗೆ ಏಳಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಎಚ್ಚರಿಸಿದರು.

ಕನ್ಹೇರಿ ಮಠದ ಪರಮ ಪೂಜ್ಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮತ್ತು ಪ್ರತ್ಯೇಕ ಲಿಂಗಾಯತ ಧರ್ಮದ ಪರ ಇರುವ ಸ್ವಾಮೀಜಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಆ ವಿಚಾರದಲ್ಲಿ ಸಚಿವ ಎಂ.ಬಿ. ಪಾಟೀಲರು ಕನ್ಹೇರಿ ಶ್ರೀಗಳನ್ನು ಟೀಕೆ ಮಾಡುವುದು ಸರಿಯಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಕುರಿತಾದ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೀಗಾಗಿ ಸಚಿವ ಎಂ.ಬಿ. ಪಾಟೀಲರು ಸಿಎಂ ಆಗಲು ಹವಣಿಸುತ್ತಿದ್ದಾರೆ. ಆದರೆ, ತಾವು ಸಿಎಂ ಆಗಲು ಹಿಂದುಗಳನ್ನು ಇಬ್ಭಾಗ ಮಾಡಬೇಡಿ. ಲಿಂಗಾಯತ ನಾಯಕ ಎಂದು ಹೇಳಿಕೊಂಡರೆ ಸಿಎಂ ಸ್ಥಾನ ಸಿಗಲಿದೆ ಎಂಬುದು ತಮ್ಮ ಮನದಿಂಗಿತ ಇರಬಹುದು. ಆದರೆ, ನೀವು ಲಿಂಗಾಯತ ನಾಯಕರಾಗುವ ನೈತಿಕ ಹಕ್ಕು ಕಳೆದುಕೊಂಡಿದ್ದೀರಿ ಎಂದರು.

ರಾಜ್ಯದಲ್ಲಿ ಬ್ರಿಟಿಷ್ ಮಾದರಿ ಸರ್ಕಾರ

ಪದೇ ಪದೇ ಹಿಂದುಗಳನ್ನು ಅವಹೇಳನ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಬ್ರಿಟಿಷ್ ಮಾದರಿ ಆಡಳಿತ ಜಾರಿಯಲ್ಲಿರಿಸುತ್ತಿದೆ ಎಂದು ಟೀಕಿಸಿದ ಗುರುಲಿಂಗಪ್ಪ ಅಂಗಡಿ ಅವರು, ಕನ್ಹೇರಿಯ ಶ್ರೀಗಳು ಬಡವರಿಗೆ, ರೈತರಿಗೆ ಹೀಗೆ ಅನೇಕ ವರ್ಗದ ಜನರಿಗೆ ಸಾಕಷ್ಟು ಜನಪರ ಕಾರ್ಯಕ್ರಮ ರೂಪಿಸುತ್ತಿದ್ದಾರೆ. ಅಂಥವರ ಟೀಕೆ ಸರಿಯಲ್ಲ. ಪಂಚಮಸಾಲಿ ಸಮಾಜ 2 ಎ ಮೀಸಲಾತಿಗಾಗಿ ಹೋರಾಟ ಹಮ್ಮಿಕೊಂಡರೆ ಲಾಠಿ ಚಾರ್ಜ್ ಮಾಡಿದ ಕಾಂಗ್ರೆಸ್ ಸರ್ಕಾರ ಎಸ್‌ಸಿ- ಎಸ್‌ಟಿ ಜನಾಂಗದ ಹಣ ಸಹ ದುರುಪಯೋಗ ಮಾಡಿಕೊಂಡಿದೆ. ಹೀಗಾಗಿ ಎಲ್ಲ ವರ್ಗದವರಿಗೂ ಈ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದರು.

ಅಭಿವೃದ್ಧಿಗೆ ಹಿನ್ನಡೆ

ಬಬಲೇಶ್ವರ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ರಸ್ತೆಗಳು ಹದಗೆಟ್ಟಿವೆ. ಯಾವಾಗಲೋ ಒಮ್ಮೆ ಮತಕ್ಷೇತ್ರಕ್ಕೆ ಬರುವ ತಮಗೆ ಕಾಣುವುದು ಹೇಗೆ? ಎಂದು ಸಚಿವ ಎಂ.ಬಿ. ಪಾಟೀಲರ ವಿರುದ್ಧ ಹರಿಹಾಯ್ದ ಅಂಗಡಿ ಅವರು, ವಿಜಯಪುರ ನಗರ ಸಹ ಗುಂಡಿಮಯವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜ್ ನಿರ್ಮಾಣಕ್ಕಾಗಿ ತಿಂಗಳ ಪರ್ಯಂತ ಹೋರಾಟ ನಡೆಯುತ್ತಿದ್ದರೂ ಕ್ಯಾರೆ ಎನ್ನುತ್ತಿಲ್ಲ. ತಮ್ಮ ಬಾಯಿ ಬಿದ್ದು ಹೋಗಿದೆ. ಫುಡ್ ಪಾರ್ಕ್ ಗೆ ಜಾಗೆ ಮಂಜೂರಾಗಿ ಐದು ಕೋಟಿ ರೂಪಾಯಿ ಬಿಡುಗಡೆಯಾದರೂ ಕಾರ್ಯಗತಗೊಂಡಿಲ್ಲ. ಬೆಳೆ ಹಾನಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಅಂಥದರಲ್ಲಿ ಅಭಿವೃದ್ಧಿ ಕಡೆ ಗಮನ ಕೊಡುವುದು ಬಿಟ್ಟು, ಜಾತಿ-ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಮಾಡಬೇಡಿ. ಸಮಾಜದಲ್ಲಿ ಹುಳಿ ಹಿಂಡುವ ಕೆಲಸ ಮಾಡಬೇಡಿ ಎಂದರು.

ವಕೀಲ ಡಿ.ಜಿ. ಬಿರಾದಾರ ಮಾತನಾಡಿ, 2013 ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕಾಲುವೆಗಾಗಿ ರೈತರ ಜಮೀನು ಭೂಸ್ವಾಧೀನ ಪಡಿಸಿಕೊಂಡಿದ್ದು, ಈಗಲೂ ಅದರ ಹಣ ರೈತರಿಗೆ ಕೊಟ್ಟಿಲ್ಲ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಟೀಕಿಸಿದರು.

ಮುಖಂಡರಾದ ಸಾಬು ಮಾಶ್ಯಾಳ, ಈರಣ್ಣ ರಾವೂರ, ವಿಜಯ ಜೋಷಿ ಮತ್ತಿತರರಿದ್ದರು.