ಜಿಲ್ಲೆ

ಟ್ರೇಡ್ ಲೈಸೆನ್ಸ್ ಶುಲ್ಕ ಮನ್ನಾ ಮಾಡಿ

ಮೈಸೂರು: ಲಾಕ್‌ಡೌನ್‌ನಿಂದ ಸಂಕಷ್ಟ ಎದುರಾಗಿದ್ದು, ಕಂದಾಯ ಮತ್ತು ಟ್ರೇಡ್ ಲೈಸೆನ್ಸ್ ಶುಲ್ಕವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದಿಂದ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಸರ್ಕಾರದ ಆದೇಶದ ಪ್ರಕಾರ 50 ಜನರನ್ನೊಗೊಂಡ ಮದುವೆಯನ್ನು ಕಲ್ಯಾಣ ಮಂಟಪದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಆರು ತಿಂಗಳು ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಈಗಾಗಲೇ ಮುಂಗಡ ನೀಡಿದವರು ಹಣ ವಾಪಸ್ ಕೇಳುತ್ತಿದ್ದು, ಇದರಿಂದ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

ಜಿಎಸ್‌ಟಿ, ವಿದ್ಯುತ್ ದರ, ನೀರಿನ ಶುಲ್ಕ, ಕಾರ್ಪೊರೇಷನ್ ಕಂದಾಯ, ಟ್ರೇಡ್ ಲೈಸೆನ್ಸ್, ಸೇವಾ, ಆದಾಯ ತೆರಿಗೆ, ಬ್ಯಾಂಕ್ ಸಾಲ, ಸಿಬ್ಬಂದಿ ವೇತನ ಸೇರಿದಂತೆ ಇತರ ಖರ್ಚು ವೆಚ್ಚಗಳನ್ನು ಪಾವತಿ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಶುಲ್ಕ ಮನ್ನಾ ಮಾಡಬೇಕು ಎಂದು ಮನವಿ ಮಾಡಲಾಯಿತು.

ಮನವಿ ಸ್ವೀಕರಿಸಿದ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಅವರು, ತೆರಿಗೆ ಮನ್ನಾ ಮಾಡುವ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಮದುವೆಗೆ ಹೆಚ್ಚು ಜನ ಸೇರುವ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದರು.

ಮೈಸೂರು ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಸಂಘದ ಎಸ್.ಮೂರ್ತಿ, ಮನೋಜ್ ಶೆಣೈ ಇತರರು ಇದ್ದರು.