ಜಿಲ್ಲೆ

ಕಾತೂರ ಸೇವಾ ಸಂಘದಲ್ಲಿ ಪಡೆದ ಬೆಳೆ ಸಾಲ ಮನ್ನಾ ಮಾಡಿ

ಮುಂಡಗೋಡ: ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ಸಹಕಾರಿ ಸಂಘದಿಂದ ವಿತರಿಸಿದ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಹಾಗೂ ಬೆಳೆ ವಿಮೆಯನ್ನು ರೈತರಿಗೆ ನೀಡಬೇಕು ಎಂದು ಕಾತೂರ ಸೇವಾ ಸಹಕಾರಿ ಸಂಘದ ಆಡಳಿತ ಸಮಿತಿಯ ಸದಸ್ಯರು ಹಾಗೂ ರೈತರು ತಹಸೀಲ್ದಾರ್ ಗುರುವಾರ ಮನವಿ ಸಲ್ಲಿಸಿದರು.


ಮುಂಡಗೋಡ ತಾಲೂಕನ್ನು ಸರ್ಕಾರ ಈಗಾಗಲೇ ಬರಪೀಡಿತ ಪ್ರದೇಶವೆಂದು ಘೊಷಣೆ ಮಾಡಿದೆ. ಆದರೆ, ಸಂಘದಿಂದ ಬೆಳೆ ಸಾಲ ಪಡೆದು ರೈತರು ಬೆಳೆಗಳು ಹಾನಿಯಾಗಿದ್ದರಿಂದ ಅಪಾರ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ. ಭತ್ತ, ಅಡಕೆ, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ನಾಶವಾಗಿವೆ. ಇದರಿಂದ ರೈತರು ಸಂಘದಿಂದ ಪಡೆದ ಬೆಳೆ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕಾತೂರ ಸಹಕಾರಿ ಸಂಘದಿಂದ ಪಡೆದ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಹಾಗೂ ವಿಮೆ ತುಂಬಿರುವ ರೈತರಿಗೆ ಬೆಳೆ ವಿಮೆ ನೀಡಬೇಕು ಎಂದು ತಿಳಿಸಿದ್ದಾರೆ.
ಅಡಕೆ ಬೆಳೆಯ ಹೂ ಉದುರಿ ಹೋಗಿದೆ. ಇದರಿಂದ ಈ ವರ್ಷ ಅಡಕೆ ಇಳುವರಿಯ ಮೇಲೆ ತೀವ್ರ ಪರಿಣಾಮ ಬೀರಿದೆ, ಇನ್ನೂ ಭತ್ತ, ಮೆಕ್ಕೆಜೋಳವೂ ಹಾಳಾಗಿವೆ. ಈ ಕುರಿತು ಸಂಘದ ಸಭೆಯಲ್ಲಿ ಸದಸ್ಯರು ರೈತರೊಂದಿಗೆ ರ್ಚಚಿಸಿ ಈ ನಿರ್ಣಯಕ್ಕೆ ಬಂದಿದ್ದು, ಕಾತೂರ ಸಹಕಾರಿ ಸಂಘದ ವ್ಯಾಪ್ತಿಯಲ್ಲಿನ ರೈತರಿಗೆ ಬೆಳೆ ವಿಮೆ ಹಾಗೂ ಸಾಲಮನ್ನಾ ಮಾಡಬೇಕು ಎಂದು ಅವರು ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.


ಮನವಿ ಸ್ವೀಕರಿಸಿದ ತಹಸೀಲ್ದಾರ್ ಶಂಕರ ಗೌಡಿ, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ಶಿವಾಜಿ ಶಿಂಧೆ, ಮಧುಕರ ತಳವಾರ, ಮಂಜುನಾಥ ಕುಲ್ಸಾಪುರ, ಫಕೀರಪ್ಪ ಯಲ್ಲಾಪುರ, ಫಕೀರಪ್ಪ ಹರಿಜನ, ಈರಯ್ಯ ಹಿರೇಮಠ, ಬಸವರಾಜ ಕುಂಬಾರ, ನೀತಿನ್ ರಾಯ್ಕರ, ಜಗದೀಶ ಪಾಟೀಲ, ಹಾಲಪ್ಪ ರಾಣೆಬೆನ್ನೂರ, ಹನುಮವ್ವ ವಡ್ಡರ, ಈರಮ್ಮ ದೊಡ್ಡಕಂತಿಮಠ, ರಾಜವ್ವ ಮಿಶ್ರಿಕೋಟಿ, ಸಂಘದ ವ್ಯವಸ್ಥಾಪಕ ಚನ್ನಬಸಪ್ಪ ತೋರೂರ, ಕಾತೂರ ಭಾಗದ ರೈತರು ಇದ್ದರು.