ಜಿಲ್ಲೆ

ಹೆದ್ದಾರಿಯಲ್ಲೇ ಬಸ್‌ಗೆ ಕಾಯುವ ಸ್ಥಿತಿ

ಇಂದಿರಾ ಎನ್ ಕೆ

ಹರಿಪ್ರಸಾದ್ ನಂದಳಿಕೆ ಕಾರ್ಕಳ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ಪ್ರಯಾಣಿಕರ ತಂಗುದಾಣವನ್ನು ಕೆಡವಿ ಹಾಕಿದ ಪರಿಣಾಮ ಇದೀಗ ಜನ ಬಸ್ಸಿಗಾಗಿ ರಸ್ತೆ ಬದಿ ಬಿಸಿಲಲ್ಲೇ ನಿಂತು ಕಾಯುವ ಸ್ಥಿತಿ ನಿರ್ಮಾಣವಾಗಿದೆ.

ಕಾರ್ಕಳದಿಂದ ಮಂಗಳೂರು ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಸಾಣೂರು ಗ್ರಾಮದ ಮುರತಂಗಡಿ ಎಂಬಲ್ಲಿದ್ದ ಪ್ರಯಾಣಿಕರ ತಂಗುದಾಣಗಳನ್ನು ಕೆಡವಿ ಹಾಕಿದ ಪರಿಣಾಮ ಕಾರ್ಕಳ ಹಾಗೂ ಮಂಗಳೂರು ಕಡೆಯತ್ತ ಸಾಗುವ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿ ಬದಿ ಉರಿ ಬಿಸಿಲ್ಲೇ ನಿಂತು ಬಸ್‌ಗಳಿಗೆ ಕಾಯುವಂತಾಗಿದೆ. ಇನ್ನೇನು ಮಳೆಯೂ ಆರಂಭವಾಗಲಿದ್ದು, ಆಗ ಪ್ರಯಾಣಿಕರ ಪರಿಸ್ಥಿತಿ ಹೇಳತೀರದಂತಾಗುತ್ತದೆ. ಕಾಮಗಾರಿ ಗುತ್ತಿಗೆದಾರರು ತಾತ್ಕಾಲಿಕವಾಗಿಯಾದರೂ ತಂಗುದಾಣ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಅಪಾಯಕಾರಿ ಸ್ಥಿತಿ

ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುರತಂಗಡಿಯಲ್ಲಿ ಪ್ರತೀ ನಿತ್ಯ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಕೆಲಸ ಕಾರ್ಯಕ್ಕೆ ತೆರಳುವ ಮಂದಿ ಹೆದ್ದಾರಿಯಲ್ಲಿ ಬಸ್ ಕಾಯುವುದು ಮಾಮೂಲಾಗಿದೆ. ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ವಾಹನಗಳ ನಡುವೆ ರಸ್ತೆಯಲ್ಲೇ ನಿಂತು ಪ್ರಯಾಣಿಕರು ಬಸ್‌ಗೆ ಕಾಯುವುದು ಅಪಾಯಕಾರಿಯಾಗಿದೆ. ಅದರಲ್ಲೂ ಮಕ್ಕಳು ಶಾಲೆಯ ವಾಹನಕ್ಕೆ ರಸ್ತೆಯಲ್ಲೇ ನಿಂತು ಕಾಯುವ ಸ್ಥಿತಿಯಲ್ಲಿದ್ದು ತುಂಬಾನೇ ಅಪಾಯಕಾರಿಯಾಗಿದೆ. ಈಗಾಗಲೇ ತಾತ್ಕಾಲಿಕವಾಗಿ ತಂಗುದಾಣ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಹಲವು ಬಾರಿ ಜನಪ್ರತಿನಿಧಿಗಳನ್ನು ಹಾಗೂ ಅಧಿಕಾರಿಗಳನ್ನು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಿತ್ಯ ಹೆದ್ದಾರಿಯಲ್ಲೇ ಬಸ್‌ಗೆ ಕಾಯುವ ಶೋಚನೀಯ ಸ್ಥಿತಿ ಮುರತಂಗಡಿಯಲ್ಲಿದೆ.

ರಸ್ತೆಯಲ್ಲೇ ಪ್ರಯಾಣಿಕರನ್ನು ಹತ್ತಿಸಲು ಬಸ್ಸು ಹೆದ್ದಾರಿಯ ಮಧ್ಯದಲ್ಲೇ ಬ್ರೇಕ್ ಹಾಕುವುದರಿಂದ ಬಸ್‌ಗಳ ಹಿಂಭಾಗದಲ್ಲಿ ಬರುವ ವಾಹನ ಸವಾರರು ವೇಗವಾಗಿ ಬಂದು ಎಡವಟ್ಟು ಮಾಡಿಕೊಳ್ಳುವಂತಾಗಿದೆ. ಅಲ್ಲದೆ ಅಪಘಾತಕ್ಕೂ ಕಾರಣವಾಗುತ್ತಿದೆ. ಈಗಾಗಲೇ ಹಲವು ಬಾರಿ ವಾಹನ ಸವಾರರು ಎಡವಟ್ಟು ಮಾಡಿಕೊಂಡಿರುವ ಘಟನೆಯೂ ಇಲ್ಲಿದೆ.

ತಂಗುದಾಣ ನಿರ್ಮಿಸಿಕೊಡಿ

ಹೆದ್ದಾರಿಯ ಕಾಮಗಾರಿ ಆರಂಭಗೊಂಡ ಬಳಿಕ ಇಲ್ಲಿನ ಗ್ರಾಮಸ್ಥರು ಬಸ್‌ಗೆ ಕಾಯಲು ಹರಸಾಹಸವನ್ನು ಪಡುವಂತಾಗಿದೆ. ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಪ್ರಯಾಣಿಕರಿಗೆ ತಂಗುದಾಣದ ನಿರ್ಮಾಣದ ಅಗತ್ಯವಿದೆ. ಈಗಾಗಲೇ ಹಳೆಯ ತಂಗುದಾಣವನ್ನು ಕೆಡವಿ ಹಾಕಿ ಸಾಕಷ್ಟು ಸಮಯ ಕಳೆದರೂ ಇಲ್ಲಿವರೆಗೂ ಮತ್ತೆ ತಂಗುದಾಣವನ್ನು ನಿರ್ಮಾಣ ಮಾಡುವಲ್ಲಿ ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದು ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ನಿಂತು ಬಸ್‌ಗೆ ಕಾಯುವುದು ಅಪಾಯಕಾರಿಯಾಗಿರುವುದರಿಂದ ಮುರತಂಗಡಿಗೆ ತಾತ್ಕಾಲಿಕವಾಗಿಯಾದರೂ ತಂಗುದಾಣ ನಿರ್ಮಾಣದ ಅಗತ್ಯವಿದೆ ಎಂದು ಗ್ರಾಮಸ್ಥರು ಹಾಗೂ ಪ್ರಯಾಣಿಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮುಂದೆ ಬೇಡಿಕೆಯನ್ನಿಟ್ಟಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ತಂಗುದಾಣವನ್ನು ಕೆಡವಿ ಹಲವು ಸಮಯ ಕಳೆದರೂ ಸೌಜನ್ಯಕ್ಕಾದರೂ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸುವಲ್ಲಿ ಅಧಿಕಾರಿಗಳು ಮುಂದಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹಿಡಿಶಾಪ ಹಾಕುವಂತಾಗಿದೆ. ಈ ಬಾರಿಯೂ ತಂಗುದಾಣ ನಿರ್ಮಾಣಕ್ಕೆ ಅಧಿಕಾರಿಗಳು ಮುಂದಾಗದಿದ್ದಲ್ಲಿ ಗ್ರಾಮಸ್ಥರು ಪ್ರತಿಭಟಿಸುವ ಅನಿವಾರ್ಯತೆ ಇದೆ ಎಂದು ಗ್ರಾಮಸ್ಥರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಒಂದು ವಾರದೊಳಗೆ ಹೊಸ ಬಸ್ ನಿಲ್ದಾಣಕ್ಕೆ ಸ್ಥಳ ಗುರುತಿಸಿ ನಿರ್ಮಾಣ ಕಾರ್ಯ ಆರಂಭ ಮಾಡದಿದ್ದರೆ ಸಾಣೂರು ಗ್ರಾಮ ಪಂಚಾಯಿತಿ ನೇತೃತ್ವದಲ್ಲಿ ಊರಿನ ಎಲ್ಲ ಸಂಘ ಸಂಸ್ಥೆಗಳು, ಹೆದ್ದಾರಿ ಹೋರಾಟ ಸಮಿತಿ ರಸ್ತೆಗಿಳಿದು ಪ್ರತಿಭಟನೆ ಮಾಡಬೇಕಾಗುತ್ತದೆ. -ಸಾಣೂರು ನರಸಿಂಹ ಕಾಮತ್, ರಾ.ಹೆ. ಹೋರಾಟ ಸಮಿತಿ ಪ್ರಮುಖರು https://www.vijayavani.net/camps-increase-activity-among-members https://www.vijayavani.net/knowledge-is-the-key-to-success