ದೇವದುರ್ಗ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಮಹತ್ವ ಸಾರಲು ಸರ್ಕಾರ ಮಾನವ ಸರಪಳಿ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲಾ ಹಾಗೂ ತಾಲೂಕು ಆಡಳಿತದ ನಿರ್ಲಕ್ಷ್ಯದಿಂದ ಅಭಿಯಾನ ಅಸ್ತವ್ಯಸ್ಥಗೊಂಡಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ಎಸ್ಪಿ ಪುಟ್ಟಮಾದಯ್ಯಗೆ ವಿವಿಧ ದಲಿತಪರ ಸಂಘಟನೆಗಳ ಪ್ರಮುಖರು ಭಾನುವಾರ ಮನವಿ ಸಲ್ಲಿಸಿದರು.
ಹಳ್ಳಿಯಿಂದ ಕರೆದುಕೊಂಡ ಬಂದ ಮಕ್ಕಳಿಗೆ ಸಮರ್ಪಕವಾಗಿ ಕುಡಿವ ನೀರು, ಉಪಹಾರದ ವ್ಯವಸ್ಥೆ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು. ಶಾಲಾ ಮಕ್ಕಳನ್ನು ಖಾಸಗಿ ವಾಹನಗಳಲ್ಲಿ ಕೂಲಿ ಕಾರ್ಮಿಕರಂತೆ ಕರೆದುಕೊಂಡು ಬರಲಾಯಿತು. ಕ್ರೂಷರ್ ಮೇಲ್ಭಾಗದಲ್ಲಿ ಕೂರಿಸಲಾಗಿತ್ತು. ಮಾನ್ವಿ ತಾಲೂಕಿನಲ್ಲಿ ಶಾಲಾ ವಾಹನ ಅಪಘಾತ ನಡೆದು ಹೆಚ್ಚು ದಿನವಾಗಿಲ್ಲ. ಆದರೂ, ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ ಎಂದು ದೂರಿದರು.
ಅಭಿಯಾನ ಅಸ್ತವ್ಯಸ್ಥವಾಗಲು ಕಾರಣರಾದ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಿದರು.