ಚಿಕ್ಕೋಡಿ: ವೇತನ ಪರಿಷ್ಕರಣೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಅತಿಥಿ ಉಪನ್ಯಾಸಕರ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದ ವತಿಯಿಂದ ರಾಯಬಾಗದಲ್ಲಿ ಕಾರ್ಯಾಧ್ಯಕ್ಷ ಅಜಿತ ಬಸರಗಿ ನೇತೃತ್ವದಲ್ಲಿ ಶಾಸಕ ಡಿ.ಎಂ.ಐಹೊಳೆ ಅವರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಅತಿಥಿ ಉಪನ್ಯಾಸಕರಿಗೆ ಕನಿಷ್ಠ 30 ಸಾವಿರ ರೂ. ಮಾಸಿಕ ಗೌರವ ಧನ ನಿಗದಿಪಡಿಸುವುದು ಹಾಗೂ ಗುಣಮಟ್ಟದ ಶಿಕ್ಷಣ ಖಾತ್ರಿಪಡಿಸಲು ಪ್ರತಿವಷರ್ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಸೇವಾ ಹಿರಿತನ ಪರಿಗಣಿಸಿ ಕಾರ್ಯನಿರತ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಸಾಕಾರಗೊಳಿಸಲು ರಾಜ್ಯ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಸ್ವೀಕರಿಸಿ ಮಾತನಾಡಿದ ಶಾಸಕ ಡಿ.ಎಂ.ಐಹೊಳೆ, ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಸುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಹಿರಿಯ ಉಪನ್ಯಾಸಕ ಸಂಜೀವ ಮಿರ್ಜೇ, ಮೆಹಬೂಬ್ ಸುಭಾನಿ ಮುಲ್ಲಾ, ಸುನಿಲ ಶೇಖನವರ, ಸತೀಶ ಸನದಿ,ಲಕ್ಷ್ಮಣ ಕುಂಡ್ರುಕ, ದುಂಡಪ್ಪ ಸಂಗಪ್ಪಗೋಳ, ಸುಲೇಮಾನ ಪಟೇಲ್, ಪ್ರವೀಣ ಕೋಳಿ, ಕಲ್ಲಪ್ಪ ಹೇಳವಿ, ಪ್ರಶಾಂಶ ವಾಲಿಕಾರ, ಸತೀಶ ಯಶವಂತ, ಎ.ಬಿ.ಕಾಮಗೌಡ, ಮಲ್ಲಿಕಾರ್ಜುನ ನಾಯಿಕ, ಕವಿತಾ ಪಾಟೀಲ, ನೂರಜಹಾನ್ ಜಮಾದಾರ, ಅಶ್ವಿನಿ ಚನ್ನವೀರ, ಪ್ರೀತಿ ಬೊಮ್ಮನ್ನವರ, ಕೀರ್ತಿ ಬಿದ್ರೋಳ್ಳಿಕರ, ಸುಹಾಸಿನಿ ಪಾಟೀಲ, ಐಶ್ವರ್ಯಾ ಮೂರಾಬಟ್ಟೇ, ತೇಜಸ್ವಿನಿ ಸಾರವಾಡ ಇತರರಿದ್ದರು.