ವಡಗೇರಾ ತಾಲೂಕಿನ ಹುಲಕಲ್(ಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಅಂಬಿಕಾ ಶೆಟ್ಟಿ ವರ್ಗಾವಣೆಗೊಂಡ ಶಿಕ್ಷಕಿ ಅಂಬಿಕಾ ಶೆಟ್ಟಿ ಅವರನ್ನು ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಕಣ್ಣೀರಿಡುತ್ತಿರುವುದು. 
ಜಿಲ್ಲೆ

ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್…

ರಾಜು ಯಮಕನಮರಡಿ

ವಡಗೇರಾ: ನೀವು ಚನ್ನಾಗಿ ಪಾಠ ಮಾಡುತ್ತೀರಿ. ಇನ್ನೂ ನಿಮ್ಮ ಪಾಠ ಕೇಳಬೇಕು. ದಯವಿಟ್ಟು ನಮ್ಮನ್ನ ಬಿಟ್ಟು ಹೋಗ್ಬೇಡಿ ಟೀಚರ್… ಎಂದು ವಿದ್ಯಾರ್ಥಿಗಳು ಶಿಕ್ಷಕಿ ಅಂಬಿಕಾ ಶೆಟ್ಟಿ ಅವರಿಗೆ ಅಪ್ಪಿಕೊಂಡು ಕಣ್ಣೀರಿಡುವ ದೃಶ್ಯ ಎಲ್ಲರ ಮನ ಕಲಕುವಂತಿತ್ತು.

ತಾಲೂಕಿನ ಹುಲಕಲ್(ಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧೫ ವರ್ಷದಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಂಬಿಕಾ ಶೆಟ್ಟಿ ಈಗ ಉಡುಪಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಬೀಳ್ಕೊಡುಗೆ ಕರ‍್ಯಕ್ರಮದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬೇಸರಗೊಂಡು ಕಣ್ಣೀರು ಹಾಕುತ್ತ ಗೋಳಾಡಿದರು.

ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅಳುತ್ತಳೇ ಶಿಕ್ಷಕಿ ಅವರನ್ನು ತಬ್ಬಿಕೊಂಡು ಕಣ್ಣೀರು ಹಾಕಿದರು. ಇದರಿಂದ ಭಾವುಕರಾಗಿ ಕಣ್ಣೀರು ಸುರಿಸಿದರು. ಈ ಪರಿಯ ಪ್ರೀತಿ ಕೊಟ್ಟ ಶಾಲೆಗೆ ಪ್ರೀತಿಯ ಧನ್ಯವಾದ ತಿಳಿಸಿ, ಕಣ್ಣೀರು ತಡೆಗೋಡೆಯಂತೆ ನಿಂತಿದೆ. ಅಭಿಮಾನ ಅಡ್ಡಲಾಗಿ ನಿಂತಿದೆ. ಬಿಟ್ಟು ಹೋಗಲು ಆಗುತ್ತಿಲ್ಲ. ಕಂಬನಿ ನೋಡೋಕೆ ಆಗುತ್ತಿಲ್ಲ ಎಂದು ಬಿಕ್ಕುತ್ತಾ ಶಿಕ್ಷಕಿ ಅಂಬಿಕಾ ಶೆಟ್ಟಿ ಮುಂದೆ ಹೆಜ್ಜೆ ಹಾಕಿದರು.

ಕವಿ-ಕಲಾವಿದ ದೇವಿಂದ್ರ ಹುಲ್ಕಲ್ ಮಾತನಾಡಿ, ಶಿಕ್ಷಕಿ ಅಂಬಿಕಾ ಶೆಟ್ಟಿ ಅವರು ಪ್ರತಿಭಾವಂತ, ಕ್ರಿಯಾಶೀಲ, ಸೃಜನಶೀಲ ಸ್ನೇಹ ಜೀವಿ. ಪ್ರತಿಭಾವಂತ ಮಕ್ಕಳನ್ನು ಸದಾ ಪ್ರೋತ್ಸಾಹಿಸುವ ದೈವ ಸ್ವರೂಪಿ. ಮಕ್ಕಳ ಶೈಕ್ಷಣಿಕ ಬದುಕು ಉಜ್ವಲಗೊಳ್ಳುವಲ್ಲಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರಂತ ಪ್ರತಿಭಾವಂತ ಶಿಕ್ಷಕಿಯರು ಪ್ರತಿಯೊಂದು ಶಾಲೆಯಲ್ಲಿ ಬಹಳ ಅಗತ್ಯವಿದೆ ಎಂದರು.

ಬಿಆರ್‌ಪಿ ರಾಜಕುಮಾರ, ಶಿಕ್ಷಕರಾದ ಸೂಗಣ್ಣ, ಸಿಆರ್‌ಪಿ ರಮೇಶ, ವಿಶ್ವನಾಥರೆಡ್ಡಿ ಅಬ್ಬೆತುಮಕೂರು, ಮುಖ್ಯಶಿಕ್ಷಕ ದೇವಿಂದ್ರಪ್ಪ, ಸಹಶಿಕ್ಷಕ ಲಿಲೇಶ, ಕಾವೇರಿ, ಬಸಲಿಂಗಮ್ಮ, ವಿಶ್ವಾರಾಧ್ಯ, ವಿಶ್ವಾರಾಧ್ಯ ನಾಯಕ, ಸಂಗಪ್ಪ ನಾಯಕ, ಜಾವೀದ್, ದೊಡ್ಡ ಮಾನಪ್ಪ ನಾಟೇಕರ, ನಾಗಪ್ಪ ನಾಟೇಕರ, ಬಂಡೆಪ್ಪ ನಾಟೇಕರ, ನಜೀರ್ ಪಟೇಲ್ ಇತರರಿದ್ದರು.