ಕನಕಗಿರಿ: ಹಲವು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನ ವಡಕಿ ಗ್ರಾಮದಲ್ಲಿ ರಸ್ತೆಗಳು ಕೆಸರುಮಯವಾಗಿದ್ದು, ವಾಹನ ಸವಾರರು, ಜನರ ಸಂಚಾರಕ್ಕೆ ತೊಂದರೆಯಾಗಿದೆ.
ಇದನ್ನೂ ಓದಿ:http://ವಡಕಿಯ ರಸ್ತೆಯಲ್ಲಿ ಸಂಚರಿಸುವುದೇ ಪಜೀತಿ
ಜಿನುಗು ಮಳೆಗೆ ಜನ ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅನಿವಾರ್ಯವಾಗಿ ಕೆಲಸಗಳಿಗೆ ಗ್ರಾಮಸ್ಥರು ಹೊರಗೆ ಬರಬೇಕಾದರೂ ರಸ್ತೆಯಲ್ಲಿ ಸಿಲುಕಿಕೊಳ್ಳುವ ಆತಂಕದಲ್ಲಿ ಹೆಜ್ಜೆ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮದಲ್ಲಿ ಕೇಂದ್ರ ಸರ್ಕಾರದ ಜೆಜೆಎಂ ಕಾಮಗಾರಿ ಅಪೂರ್ಣಗೊಂಡಿದ್ದೇ ಇದಕ್ಕೆಲ್ಲಾ ಕಾರಣ ಎನ್ನಲಾಗಿದೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರು ಸಿಸಿ ರಸ್ತೆಯನ್ನು ಅಗೆದು ಪೈಪ್‌ಲೈನ್ ಮಾಡಿದ್ದು, ನಂತರ ಮುಚ್ಚಿದ ಮೇಲೆ ಕಾಂಕ್ರೀಟ್ ಹಾಕುವುದನ್ನು ಬಿಟ್ಟಿದ್ದಾರೆ. ಇದರಿಂದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ನೆನೆದು ಕೆಸರುಮಯವಾಗಿದೆ. ಆಕಸ್ಮಿಕ ಹೆಜ್ಜೆ ಇಟ್ಟರೂ ಸಿಲುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಕ್ಕೆ ಹೊಸದಾಗಿ ಬರುವ ವಾಹನ ಸವಾರರು ಕೇಸರಿನಲ್ಲಿ ಸಿಲುಕಿ ಪಜೀತಿ ಅನುಭವಿಸಿ ಸ್ಥಳೀಯರ ಸಹಾಯದಿಂದ ವಾಪಾಸ್ಸು ತೆರಳಿರುವ ಹಲವು ಉದಾಹರಣೆಗಳು ದಿನನಿತ್ಯ ನಡೆಯುತ್ತಿವೆ. ಈ ಬಗ್ಗೆ ಸ್ಥಳೀಯರು ಗುತ್ತಿಗೆದಾರರನ್ನು ವಿಚಾರಿಸಿದರೂ ಸ್ಪಂದನೆ ದೊರೆಯುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಈ ಬಗ್ಗೆ ನನಗೂ ಸ್ಥಳೀಯರು ಮಾಹಿತಿ ನೀಡಿದ್ದು ಜನತೆಗೆ ಸಮಸ್ಯೆಯಾಗಿದೆ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಬೇಕು. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೂ ಚರ್ಚಿಸಲಾಗುವುದು. ವೀರಣ್ಣ ನಕ್ರಳ್ಳಿ ಗ್ರಾಪಂ ಪಿಡಿಒ ಕರಡೋಣ