ವಿರಾಜಪೇಟೆ : ಶಿಕ್ಷಣ ಪಡೆದ ವಿದ್ಯಾಸಂಸ್ಥೆಯ ಪ್ರಗತಿಗಾಗಿ ಹಿರಿಯ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪೂರಕ ಕಾರ್ಯಚಟುವಟಿಕೆ ರೂಪಿಸಬೇಕು ಎಂದು ಸೇಂಟ್ ಆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾದರ್ ಮದಲೈ ಮುತ್ತು ಹೇಳಿದರು. ಕಾಲೇಜಿನಲ್ಲಿ ಶನಿವಾರ ಹಳೆಯ ವಿದ್ಯಾರ್ಥಿ ಸಂಘದ ಸಮ್ಮಿಲನ ಕಾರ್ಯಕ್ರಮ 2024- ಉದ್ಘಾಟಿಸಿ ಮಾತನಾಡಿದರು. ಇದೇ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದವರು ಒಂದೆಡೆ ಸೇರಲು ಹಳೆಯ ವಿದ್ಯಾರ್ಥಿ ಸಂಘ ಉತ್ತಮ ವೇದಿಕೆಯಾಗಿದೆ ಎಂದರು. ಇಲ್ಲಿ ಓದಿ ಹೋದ ವಿದ್ಯಾರ್ಥಿಗಳು ಸಂಘದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಿರಿಯರಿಗೆ ಆದರ್ಶವಾಗಬೇಕು ಎಂದು ಅವರು ಸಲಹೆ ನೀಡಿದರು.
ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಫಾದರ್ ಜೇಮ್ಸ್ ಡೊಮಿನಿಕ್ ಮಾತನಾಡಿ, ಹಿರಿಯ ವಿದ್ಯಾರ್ಥಿಗಳು ಸದಾ ತಾವು ಕಲಿತ ವಿದ್ಯಾಸಂಸ್ಥೆಗೆ ಕೃತಜ್ಞರಾಗಿರಬೇಕು. ಜೊತೆಗೆ ಸಂತೋಷದ ಕ್ಷಣಗಳನ್ನು ಸಂಭ್ರಮಿಸಬೇಕು ಎಂದರು. ಪದವಿ ಕಾಲೇಜಿನ ಪ್ರಾಂಶುಪಾಲೆ, ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ತೃಪ್ತಿ ಬೋಪಣ್ಣ ಮಾತನಾಡಿ, ಹಳೆಯ ವಿದ್ಯಾರ್ಥಿಗಳು ವೃತ್ತಿ ಮಾರ್ಗದರ್ಶನ, ಹಣಕಾಸಿನ ನಿರ್ವಹಣೆ ಹಾಗೂ ಕಾಲೇಜು ಒದಗಿಸಿದ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಮನೋರಂಜನಾ ಆಟಗಳು ಮುದ ನೀಡಿದವು. ಉಪನ್ಯಾಸಕರಾದ ಸುನೀತಾ, ಜೋಯ್ಸನ್ ಲೋಬೋ, ಐಕ್ಯೂಎಸಿ ಸಂಚಾಲಕಿ ಹೇಮಾ, ನಿಕೇತಾ ಜೋಯ್ಸ ಇದ್ದರು.