ರಾಮನಗರ : ರಾಮದೇವರ ಬೆಟ್ಟ ಏಷ್ಯಾಖಂಡದಲ್ಲೇ ಪ್ರಥಮ ರಣಹದ್ದು ಧಾಮವಾಗಿದ್ದು, ಅಂತೆಯೇ, ರಣಹದ್ದುಗಳ ಸಂತಾನ ಹೆಚ್ಚಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟದಲ್ಲಿ ನಿರ್ಮಿಸಿರುವ ಬ್ರೀಡಿಂಗ್ ಸೆಂಟರ್ ಶೀಘ್ರದಲ್ಲಿ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು.
ರಾಮನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ರಾಮನಗರ ಪ್ರಾದೇಶಿಕ ವಿಭಾಗ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ರಾಮದೇವರ ಬೆಟ್ಟದ ರಣಹದ್ದು ವನ್ಯಜೀವಿಧಾಮದಲ್ಲಿಯೇ ಬ್ರೀಡಿಂಗ್ ಸೆಂಟರ್ ತೆರೆಯಲು ಯೋಜನೆ ರೂಪಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಬ್ರೀಡಿಂಗ್ ಸೆಂಟರ್ ಅನ್ನು ಬನ್ನೇರುಘಟ್ಟದಲ್ಲಿ ತೆರೆಯಲಾಗುತ್ತಿದೆ ಎಂದರು.
ರಾಮದೇವರ ಬೆಟ್ಟದಲ್ಲಿ ರಿಲೀಸಿಂಗ್ ಸೆಂಟರ್ ತೆರೆಯಲಾಗುತ್ತದೆ. ಬನ್ನೇರುಘಟ್ಟದಲ್ಲಿ ಸಿದ್ಧವಾದ ರಣಹದ್ದು ಮರಿಗಳನ್ನು ರಾಮನಗರದ ರಾಮದೇವರ ಬೆಟ್ಟದಲ್ಲಿ ಬಿಡಲಾಗುತ್ತದೆ. ರಣಹದ್ದು ಬ್ರೀಡಿಂಗ್ ಸೆಂಟರ್ ನವೆಂಬರ್ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.
ರಾಮದೇವರ ಬೆಟ್ಟ 856 ಎಕರೆ ವಿಸ್ತೀರ್ಣ ಅರಣ್ಯ ಪ್ರದೇಶ ಹೊಂದಿದೆ. 2012ರಲ್ಲಿ ರಣಹದ್ದು ವನ್ಯಜೀವಿಧಾಮವನ್ನಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಬೆಟ್ಟದಲ್ಲಿ ಇಲ್ಲಿಯವರೆಗೆ 9 ಉದ್ದಕೊಕ್ಕಿನ ರಣಹದು,್ದ 9 ಹಿಮಾಲಯನ್ ಗ್ರೀಫನ್ ರಣಹದ್ದುಗಳು ಕಾಣಿಸಿಕೊಂಡಿವೆ. ಇಲ್ಲಿ, ಉದ್ದ ಕೊಕ್ಕಿನ ರಣಹದ್ದು ಮರಿ ಮಾಡುತ್ತಿರುವುದು ಸಂತಸ ತಂದಿದೆ. 1917ರಲ್ಲಿ ರಾಮದೇವರ ಬೆಟ್ಟವನ್ನು ಅಂದಿನ ಮೈಸೂರು ಸಂಸ್ಥಾನ ಮೀಸಲು ಅರಣ್ಯ ಎಂಬುದಾಗಿ ಘೋಷಣೆ ಮಾಡಿತ್ತು. ಹಿಂದಿಯ ಖ್ಯಾತ ಸಿನಿಮಾ ಶೋಲೆ ಇಲ್ಲಿ ಚಿತ್ರೀಕರಣ ಮಾಡಿದ್ದ ಕಾರಣ, ಈ ಬೆಟ್ಟಕ್ಕೆ ರಾಮ್‌ಘಡ್ ಎಂಬ ಹೆಸರುಬಂದಿದೆ ಎಂದರು.
ರಾಮದೇವರ ಬೆಟ್ಟದ ವನ್ಯಜೀವಿ ಜೀವಶಾಸ್ತ್ರಜ್ಞ ದರ್ಶನ್ ಮಾತನಾಡಿ, ಪ್ರಪಂಚದಲ್ಲಿ ರಣಹದ್ದುಗಳು ಶೇ.1 ಮಾತ್ರ ಕಾಣಸಿಗುತ್ತಿವೆ. ಶೇ.99 ನಾಶವಾಗಿವೆ. ಜಿಂಕೆ ಗಾತ್ರದಿಂದ ಹಿಡಿದು ಆನೆಗಾತ್ರದವರೆಗಿನ ಮೃತ ಪ್ರಾಣಿಗಳ ಕೊಳೆತ ದೇಹವನ್ನು ತಿಂದು ಜೀವಿಸುತ್ತವೆ. ರಣಹದ್ದುಗಳು ಜಿಂಕೆಗಿಂತ ಕಡಿಮೆ ಗಾತ್ರದ ಸತ್ತ ಮಾಂಸ ತಿನ್ನುವುದಿಲ್ಲ. ಈ ಮೊದಲು ರಣಹದ್ದುಗಳಿಗೆ ಸುಲಭವಾಗಿ ಆಹಾರ ಸಿಗುತ್ತಿತ್ತು. ಕಾಲ ಬದಲಾದಂತೆ ವನ್ಯ ಪ್ರಾಣಿಗಳು ಈ ಭಾಗದಲ್ಲಿ ಕಡಿಮೆಯಾಗಿ ಸತ್ತ ಪ್ರಾಣಿಗಳು ಸಿಗದ ಕಾರಣ ದೂರ ಪ್ರದೇಶಕ್ಕೆ ರಣಹದ್ದುಗಳು ಆಹಾರ ಹುಡುಕಿ ಹೋಗುತ್ತಿವೆ. ಈ ಭಾಗದ ರಣಹದ್ದುಗಳು ಕಾವೇರಿ ವನ್ಯಜೀವಿಧಾಮದ ಕಡೆ ಹೋಗುತ್ತಿರುವುದು ಕಂಡು ಬಂದಿದೆ ಎಂದರು.
ಎಸಿಎಫ್ ಪುಟ್ಟಮ್ಮ, ಆರ್‌ಎಸ್‌ಪಿಬಿನ ಮ್ಯಾನೇಜರ್ ಕ್ರಿಸ್ ಬೋಡೆನ್ ದೇವೋಜಿ ದಾಸ್, ರಾಮನಗರ ವಲಯ ಅರಣ್ಯಾಧಿಕಾರಿ ಮನ್ಸೂರ್, ಚನ್ನಪಟ್ಟಣ ಮಲ್ಲೇಶ್, ಮಾಗಡಿ ಚೈತ್ರಾ, ಉಪ ವಲಯರಣ್ಯಾಧಿಕಾರಿ ಕುಮಾರ್ ಇದ್ದರು.
ರಣ ಹದ್ದು ವೀಕ್ಷಣೆ
ವನ್ಯಜೀವಿತಜ್ಞರು, ವನ್ಯ ಪ್ರೇಮಿಗಳು, ಶಿಬಿರಾರ್ಥಿಗಳು ಬೆಳಗ್ಗೆಯೇ ರಣಹದ್ದುಗಳನ್ನು ನೋಡಲು ಬೆಟ್ಟಕ್ಕೆ ಆಗಮಿಸಿ ರಣಹದ್ದುಗಳನ್ನು ವೀಕ್ಷಿಸಿ ಖುಷಿ ಪಟ್ಟರು.
ತೊಂದರೆ ಆಗದಂತೆ ನಿಗಾ
ರಾಮದೇವರ ಬೆಟ್ಟದ ಸುತ್ತಮುತ್ತ ಅಭಿವೃದ್ಧಿಯಾಗುತ್ತಿದ್ದು, ಇದು ರಣಹದ್ದುಗಳಿಗೆ ತೊಂದರೆಯಾಗುವುದಿಲ್ಲವೇ ಎಂದು ಶಿಬಿರಾರ್ಥಿಯೊಬ್ಬರು ಪ್ರಶ್ನಿಸಿದ ಸಂದರ್ಭದಲ್ಲಿ ಡಿಎಫ್‌ಒ ರಾಮಕೃಷ್ಣಪ್ಪ ಉತ್ತರಿಸಿ, ರಾಮದೇವರ ಬೆಟ್ಟ ಸುತ್ತಮುತ್ತಲ ಪ್ರದೇಶದಲ್ಲಿ ಗುಡಿ ಕೈಗಾರಿಕೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಮನೆ ಕಟ್ಟಲು ಬಿಟ್ಟು ಬೇರೆ ಯಾವುದೇ ಕಾರ್ಯ ಚುಟುವಟಿಕೆ ನಿಷೇಧಿಸಲಾಗಿದೆ. ರಣಹದ್ದು ಧಾಮಕ್ಕೆ ಯಾವುದೇ ತೊಂದರೆ ಆಗದಂತೆ ಅರಣ್ಯ ಇಲಾಖೆ ನಿಗಾವಹಿಸಲಿದೆ ಎಂದರು.
ರಣಹದ್ದುಗಳಿಗೆ ವಿಷಕಾರಿಯಾಗಿರುವ ಜಾನುವಾರುಗಳಿಗೆ ನೀಡುವ ಕೆಲವು ಔಷಧಗಳು ನಿಷೇಧವಾಗಬೇಕು. 3 ತರಹದ ಔಷಧಗಳು ನಿಷೇಧವಾಗಿವೆ. ಇನ್ನೂ 2 ಔಷಧಗಳು ನಿಷೇಧವಾಗಬೇಕು. ಆಗ ನಾವು ರಣಹದ್ದುಗಳನ್ನು ಹೆಚ್ಚಿನ ರೀತಿಯಲ್ಲಿ ಕಾಪಾಡಬಹುದು. ತಿನ್ನುವ ಅನ್ನ, ಶುದ್ಧ ಗಾಳಿ ನಮಗೆ ಸಿಗಬೇಕಾದರೆ ರಣಹದ್ದುಗಳ ಕೊಡುಗೆಯೂ ಅಪಾರವಾಗಿದೆ. ರಣಹದ್ದುಗಳ ಸಂರಕ್ಷಣೆ ಅರಣ್ಯ ಇಲಾಖೆಯಿಂದಷ್ಟೇ ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅತೀ ಮುಖ್ಯ. - ಪ್ರಯಾಗ್, ವನ್ಯಜೀವಿ ತಜ್ಞ.