ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು(ವಿಟಿಯು) ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಆನ್ಲೈನ್ ಮೂಲಕವೇ ನಡೆಸಲು ತೀರ್ಮಾನಿಸಿದ್ದು, ಇದರ ಜತೆಗೆ ಡಿ.21ರಿಂದ ಆನ್ಲೈನ್ ಮೂಲಕವೇ ತರಗತಿ ಆರಂಭಿಸಲು ನಿರ್ಧರಿಸಿದೆ.
ಅಂತಿಮ ಸೆಮಿಸ್ಟರ್ ತರಗತಿಗಳು ಈಗಾಗಲೇ ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ಪ್ರಥಮ ವರ್ಷದ ಪ್ರವೇಶಾತಿ ಪ್ರಕ್ರಿಯೆ ಚಾಲ್ತಿಯಲ್ಲಿರುವ ಹಿನ್ನೆಲೆಯಲ್ಲಿ ಡಿ.14ರಿಂದ ಡಿ.19ರ ಅವಧಿಯಲ್ಲಿ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಪರಿಚಯ ಕಾರ್ಯಕ್ರಮವನ್ನು ಆನ್ಲೈನ್ ಮೂಲಕವೇ ನಡೆಸಬೇಕು. ವಿಳಂಬವಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೂ ಪ್ರತ್ಯೇಕವಾಗಿ ಪರಿಚಯ ಕಾರ್ಯಕ್ರಮ ನಡೆಸಬೇಕು. ಆನ್ಲೈನ್ ವ್ಯವಸ್ಥೆಯಲ್ಲಿ ಸಿಗಬಹುದಾದ ಸಮಯವನ್ನು ನೋಡಿಕೊಂಡು ಪರಿಚಯ ಕಾರ್ಯಕ್ರಮ ನಡೆಸಲು ಎಲ್ಲ ಇಂಜಿನಿಯರಿಂಗ್ ಕಾಲೇಜುಗಳಿಗೆ ವಿಟಿಯು ಸೂಚನೆ ನೀಡಿದೆ.
ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ತರಗತಿಗಳು ಆನ್ಲೈನ್ ಮೂಲಕವೇ ಡಿ.21ರಿಂದ ಆರಂಭ ಮಾಡಬೇಕು. ಸರ್ಕಾರದಿಂದ ಅಥವಾ ವಿಶ್ವವಿದ್ಯಾಲಯದಿಂದ ಮುಂದಿನ ಆದೇಶ ಬರುವವರೆಗೂ ಆನ್ಲೈನ್ ಮೂಲಕವೇ ತರಗತಿಗಳನ್ನು ಮುಂದುವರಿಸಬೇಕು ಎಂದು ಕಾಲೇಜುಗಳಿಗೆ ನಿರ್ದೇಶನ ನೀಡಿದೆ.