ಬೆಳಗಾವಿ : ಉನ್ನತ ವ್ಯಾಸಂಗ ಮುಂದುವರಿಸುವ ಹಾಗೂ ಇಂಜಿನಿಯರಿಂಗ್ ಪದವಿ ಮುಗಿಸಿದ ತಕ್ಷಣವೇ ಪ್ರತಿಷ್ಠಿತ ಕಂಪನಿಗಳಿಗೆ ನೇಮಕಗೊಂಡು ವೃತ್ತಿ ಬದುಕು ಆರಂಭಿಸುವವರ ಅನುಕೂಲಕ್ಕಾಗಿ ಪ್ರಸಕ್ತ ವರ್ಷದಿಂದ 8ನೇ ಸೆಮಿಸ್ಟರ್‌ನ ಫಲಿತಾಂಶವನ್ನು ಮೇ ತಿಂಗಳಿನಲ್ಲೇ ಪ್ರಕಟಿಸಲಾಗಿದೆ ಎಂದು ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗತ್ಯಬಿದ್ದರೆ ಪಿಜಿ ವಿದ್ಯಾರ್ಥಿಗಳ ಪದವಿ ಪ್ರದಾನಕ್ಕಾಗಿ ಫೆಬ್ರವರಿ ತಿಂಗಳಲ್ಲಿ ಪೂರಕ ಘಟಿಕೋತ್ಸವ ನಡೆಸಲಾಗುವುದು. ಐಐಟಿ ಹಾಗೂ ಐಐಐಟಿಯಂಥ ಅಂತಾರಾಷ್ಟ್ರೀಯ ಸಂಸ್ಥೆ ಹಾಗೂ ವಿದೇಶಿ ವಿಶ್ವವಿದ್ಯಾಲಯಗಳ ಶೈಕ್ಷಣಿಕ ವರ್ಷಾರಂಭಕ್ಕೆ ಪ್ರವೇಶಾತಿಗಾಗಿ ಅನಗತ್ಯವಾಗಿ ಒಂದು ವರ್ಷ ಕಾಯುವುದು ತಪ್ಪುವುದರ ಜತೆಗೆ ಪದವಿ ಪಡೆದ ವರ್ಷದಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳಲು ಅನುಕೂಲವಾಗಲಿದೆ. ಹೀಗಾಗಿ ಪಿಜಿ ಕೋರ್ಸ್‌ಗಳ ಫಲಿತಾಂಶಕ್ಕೂ ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳುವ ವರೆಗೂ ವಿಶ್ವವಿದ್ಯಾಲಯದಿಂದ ಪೂರಕ ಘಟಿಕೋತ್ಸವಗಳನ್ನು ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಬಿ.ಈ.ರಂಗಸ್ವಾಮಿ ಹಾಗೂ ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ಇದ್ದರು.