ಜಿಲ್ಲೆ

ವಿಎಸ್‌ಕೆಯು 11ನೇ ಘಟಿಕೋತ್ಸವ: ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್

ಬಳ್ಳಾರಿ :ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 11ನೇ ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೂರು ಜನ ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಗ್ರಾಮದ ಕವಿತಾ ಮಿಶ್ರಾ, ಸಮಾಜ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಿ.ಹಿರೇಹಾಳ್ ಗ್ರಾಮದ ಡಿ.ಹಿರೇಹಾಳ್ ಇಬ್ರಾಹಿಂ (ಮರಣೋತ್ತರ) ಮತ್ತು ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಬಳ್ಳಾರಿ ಜಿಲ್ಲೆಯವರಾದ ಹಿಂದೂಸ್ತಾನಿ ಗಾಯಕ ಎಂ.ವೆಂಕಟೇಶ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು.

ದಿವಂಗತ ಇಬ್ರಾಹಿಂ ಅವರ ಪುತ್ರ ದಾದಾ ಕಲಂದರ್ ಅವರು ಸ್ವೀಕರಿಸಿದರು. ಇನ್ನು ವೆಂಕಟೇಶ್‌ಕುಮಾರ್ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. ವಿವಿಧ ವಿಭಾಗಗಳ ಒಟ್ಟು 32 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಪ್ರಮಾಣ ಪತ್ರ ಸ್ವೀಕರಿಸಿದರು.

ಇದೇ ವೇಳೆ ಘಟಿಕೋತ್ಸವದಲ್ಲಿ ಅಧ್ಯಕ್ಷತೆವಹಿಸಿದ್ದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ವಿಶ್ವವಿದ್ಯಾಲಯಗಳ ಪಾತ್ರ ಪ್ರಮುಖವಾಗಿದೆ. ಆಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕು ಎಂದು ಸಲಹೆ ನೀಡಿದರು. ಭಾರತ ವಿಶ್ವದ ಅಗ್ರಸ್ಥಾನಗಳಲ್ಲಿ ಒಂದಾಗಬೇಕಾದರೆ ಯುವಜನತೆ ಸಹಕಾರ ಅವಶ್ಯ. ಮುಂದಿನ ದಿನಗಳಲ್ಲಿ ಯುವಭಾರತ ನಿರ್ಮಾಣಗೊಳ್ಳಬೇಕು. ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಒತ್ತು ನೀಡಬೇಕು. ಮನುಷ್ಯನಿಗೆ ಶಿಕ್ಷಣ ಅತಿಮುಖ್ಯವಾಗಿದೆ. ದೇಶದ ಹಿತದೃಷ್ಟಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಇನ್ನಷ್ಟು ಬದಲಾವಣೆಗಳಾಗಬೇಕಿದೆ. ವಿದ್ಯಾರ್ಥಿಗಳು ದೇಶದ ಕೀರ್ತಿಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಅಧ್ಯಕ್ಷ ಡಾ.ಜೆ.ಕೆ.ಬಜಾಜ್ ಅವರು ಪ್ರಧಾನ ಭಾಷಣ ಮಾಡಿದರು. ವಿವಿ ಕುಲಪತಿ ಸಿದ್ದು ಪಿ.ಅಲಗೂರ, ಕುಲಸಚಿವ ಪ್ರೊ.ಎಸ್.ಸಿ.ಪಾಟೀಲ್, ಕುಲಸಚಿವ (ಮೌಲ್ಯಮಾಪನ) ಪ್ರೊ.ರಮೇಶ್ ಓಲೇಕಾರ್ ಮತ್ತಿತರರಿದ್ದರು.