ಬಳ್ಳಾರಿ: ಬಿಲ್‌ಕಲೆಕ್ಟರ್, ರೈತರು, ನೌಕರಸ್ಥರು, ಉದ್ಯಮಿ ಮಕ್ಕಳು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು ವಿಶೇಷವಾಗಿತ್ತು. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 11ನೇ ಘಟಿಕೋತ್ಸವದಲ್ಲಿ ಒಟ್ಟು 42 ವಿದ್ಯಾರ್ಥಿಗಳು 53 ಚಿನ್ನದ ಪದಕವನ್ನು ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು.
ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯ ಖನಿಜ ಸಂಸ್ಕರಣ ವಿಭಾಗದ ರುಬಾನ್.ಎಲ್, ಔದ್ಯೋಗಿಕ ರಸಾಯನ ಶಾಸ್ತ್ರ ವಿಭಾಗದ ಹಜಿರಾಜಿ.ಎ ಹಾಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾವಿದ್ಯಾಲಯದ ವಾಣಿಜ್ಯ ಶಾಸ್ತ್ರದ ರುಷಬ್‌ಕುಮಾರ್ ಮೆಹ್ತಾ ಅವರು ತಲಾ ಮೂರು ಚಿನ್ನದ ಪದಕ ಪಡೆದರು. ಇನ್ನು ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರ ಕನ್ನಡ ವಿಭಾಗದ ಮೋಹನ್‌ಕುಮಾರ್ ಆರ್.ಜಿ, ರಸಾಯನಶಾಸ್ತ್ರ ವಿಭಾಗದ ಸ್ವಾತಿ.ಎ, ಭೌತಶಾಸ್ತ್ರ ವಿಭಾಗದ ಕಾರ್ತಿಕ್ ರೆಡ್ಡಿ ಎಚ್‌ಕೆ. ಸಮಾಜಶಾಸ್ತ್ರ ವಿಭಾಗದಲ್ಲಿ ಸುಮಾ ಕಾಯಣ್ಣನವರ ಹಾಗೂ ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯದ ಬಿಎಸ್ಸಿ ವಿಭಾಗದ ವಿಶಾಲಾಕ್ಷಿ ಅವರು ತಲಾ ಎರಡು ಚಿನ್ನದ ಪದಕ ಪಡೆಯುವ ಮೂಲಕ ಕಣ್ಮನ ಸೆಳೆದರು.
ಮೂವರು ತಲಾ ಮೂರು ಪದಕವನ್ನು ಪಡೆದರೆ, ಇನ್ನು ಐವರು ತಲಾ ಎರಡು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು ವಿಶೇಷವಾಗಿತ್ತು. ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿದರು. ಈ ವೇಳೆ ವಿವಿ ಕುಲಪತಿ ಸಿದ್ದು ಪಿ.ಅಲಗೂರ ಇನ್ನಿತರರು ಸಾಥ್ ನೀಡಿದರು.
- ಮೈನಿಂಗ್ ಕಂಪನಿ ನೌಕರನ ಮಗ ರುಬಾನ್ : ಮೈನಿಂಗ್ ಕಂಪನಿಯಲ್ಲಿ ನೌಕರನ ಮಗ ಇದೀಗ ಚಿನ್ನದ ಹುಡುಗ. ಸಂಡೂರು ತಾಲೂಕಿನ ದೇವಗಿರಿ ನಿವಾಸಿ ರುಬಾನ್ ಎಲ್. ಅವರು ಖನಿಜ ಸಂಸ್ಕರಣ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆಯುವ ಮೂಲಕ ಚಿನ್ನದ ಹುಡುಗ ಎನಿಸಿಕೊಂಡರು.
ತಂದೆ ತೌಸರ್.ಸಿ ಅವರು ಮೈನಿಂಗ್ ಕಂಪನಿಯೊಂದರಲ್ಲಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾಯಿ ರೀಟಾ ಮನೆಗೆಲಸ ಮಾಡುತ್ತಿದ್ದಾರೆ. ಚಿಕ್ಕಂದಿನಿಂದಲೇ ವಿದ್ಯಾಭ್ಯಾಸದಲ್ಲಿ ಚುರುಕುತನ ಹೊಂದಿದ್ದ ರುಬಾನ್ ಬಾಲ್ಯದ ವ್ಯಾಸಂಗ ದೇವಗಿರಿಯಲ್ಲಿ ಮುಗಿಸಿದ್ದು, ಹೊಸಪೇಟೆಯಲ್ಲಿ ಪಿಯುಸಿ, ಹುಬ್ಬಳ್ಳಿಯಲ್ಲಿ ಪದವಿ ಹಾಗೂ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂ.ಟೆಕ್ ಮುಗಿಸಿದ್ದು, ಮುಂದೆ ಖನಿಜ ಸಂಸ್ಕರಣ ಕ್ಷೇತ್ರದಲ್ಲಿ ಇನ್ನಷ್ಟು ಅಧ್ಯಯನ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದಾರೆ.
- ಬಿಲ್‌ಕಲೆಕ್ಟರ್‌ಗೆ ಚಿನ್ನದಂಥ ಮಗಳು : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಕಲೆಕ್ಟರ್ ಆಗಿರುವ ಸಾಯಿಬಣ್ಣ ಅವರ ಮಗಳು ಹಜಿರಾಬಿ ಎ. ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದುಕೊಂಡರು. ತಾಯಿ ರಜಿಯಾ ಬೇಗಂ ಗೃಹಿಣಿ. ಸಾಯಿಬಣ್ಣ ಅವರಿಗೆ ಇಬ್ಬರು ಮಕ್ಕಳು ಅದರಲ್ಲಿ ಪುತ್ರಿ ಹಜಿರಾಬಿ ಈಗ ಚಿನ್ನದ ಹುಡುಗಿ ಎನಿಸಿಕೊಂಡಿದ್ದಾರೆ. ಮಗ ಕೂಡ ಮಂಡ್ಯದಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಹಜಿರಾಬಿ ಎಮ್ಮಿಗನೂರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿ, ಬಳ್ಳಾರಿಯ ಬೆಸ್ಟ್ ಕಾಲೇಜಿನಲ್ಲಿ ಪಿಯುಸಿ, ವೀರಶೈವ ಮಹಿಳಾ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದ್ದಾರೆ. ಮುಂದೆ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಬೇಕು ಎನ್ನುವ ಕನಸು ಕಂಡಿದ್ದಾರೆ.
- ಉದ್ಯಮಿ ಮಗನ ಬಂಗಾರದ ಬೇಟೆ : ಕೊಪ್ಪಳದ ನಿವಾಸಿ ಉದ್ಯಮಿ ರಮೇಶ್ ಮೆಹ್ತಾ ಅವರ ಪುತ್ರ ರುಷಬ್ ಕುಮಾರ್ ಮೆಹ್ತಾ ಅವರು ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಮೂರು ಚಿನ್ನದ ಪದಕ ಪಡೆದುಕೊಂಡರು. ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ್ದು, ಗವಿಸಿದ್ದೇಶ್ವರ ಕಾಲೇಜಿನಲ್ಲಿ ಪಿಯುಸಿ, ಎಸ್‌ವಿಕೆ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಅದೇ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಂದೆಗೆ ತಕ್ಕ ಮಗನಾಗುವ ಕನಸು ಕಂಡಿದ್ದಾರೆ. ತಂದೆಯ ಉದ್ಯಮದ ಜವಾಬ್ದಾರಿಯನ್ನು ಹೊತ್ತು ಯುವ ಉದ್ಯಮಿಯಾಗುವ ಉದ್ದೇಶ ಹೊಂದಿದ್ದಾರೆ.