ಆರೋಪಿ ಮಹೇಶ್ 
ಜಿಲ್ಲೆ

ವೃದ್ಧೆ ಕೊಲೆ ಆರೋಪಿ ಬಂಧನ

ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ವೃದ್ಧೆ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ತಾಲೂಕಿನ ಕೆಸ್ತೂರು ಗ್ರಾಮದ ಮಹೇಶ್(45) ಬಂಧಿತ ಆರೋಪಿ. ಗ್ರಾಮದ ನಿವಾಸಿ 70ರ ವೃದ್ಧೆ ಕೆಂಪಮ್ಮ ಅವರು ಪುತ್ರ ನಂಜಯ್ಯ ಅವರೊಂದಿಗೆ ವಾಸವಾಗಿದ್ದರು. ಜು.9ರಂದು ಮಗ ಇವರಿಗೆ ಊಟ ಮಾಡಿಸಿ ಮಧ್ಯಾಹ್ನ ಹೊರ ಬಂದಿದ್ದರು. ನಂತರ ಮನೆಗೆ ಬಂದ ಸಂದರ್ಭದಲ್ಲಿ ಇವರ ಮನೆಯೊಳಗೆ ಪಕ್ಕದ ಮನೆಯ ನಿವಾಸಿ ಆರೋಪಿ ಮಹೇಶ್ ಮಲಗಿದ್ದ. ಅನುಮಾನಗೊಂಡ ನಂಜಯ್ಯ ತಾಯಿಯನ್ನು ಎಬ್ಬಿಸಲು ಹೋದಾಗ ಮೃತಪಟ್ಟಿದ್ದರು.

ಮರಣೋತ್ತರ ಪರೀಕ್ಷೆ ವೇಳೆ ದೇಹದ ಮೇಲೆ ಗಾಯದ ಗುರುತುಗಳು ಹಾಗೂ ರಕ್ತಸ್ರಾವದಿಂದ ಅತ್ಯಚಾರ ಮಾಡಿ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿತ್ತು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವೇಳೆ ಆರೋಪಿ ಮಹೇಶ್ ನಾಪತ್ತೆಯಾಗಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಭಾನುವಾರ ತಿ. ನರಸೀಪುರದಲ್ಲಿರುವ ಮಾಹಿತಿ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದರು. ಕುಡಿದ ಮತ್ತಿನಲ್ಲಿ ಅತ್ಯಾಚಾರ ಮಾಡಿದ ಹಿನ್ನೆಲೆಯಲ್ಲಿ ಕೆಂಪಮ್ಮ ಮೃತ್ತಪಟ್ಟಿದ್ದಾರೆ ಎಂದು ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನೆಕ್ಕೆ ಒಪ್ಪಿಸಲಾಗಿದೆ. ಪತ್ತೆ ಕಾರ್ಯ ಯಳಂದೂರು ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಆಕಾಶ್, ಸಿಬ್ಬಂದಿ ರಾಮಶೆಟ್ಟಿ, ನಂಜುಂಡಸ್ವಾಮಿ ಇತರರು ಇದ್ದರು.