ಜಿಲ್ಲೆ

ವೈದ್ಯ ವೃತ್ತಿಯ ಪಾವಿತ್ರತೆ ಉಳಿಸಿ, ಬೆಳಸುವ ಜವಾಬ್ದಾರಿ ಯುವ ವೈದ್ಯರ ಮೇಲಿದೆ : ಡಾ.ಎಚ್.ರಾಜಶೇಖರ ಆಶಯ

ಬೆಳಗಾವಿ : ವೈದ್ಯ ವೃತ್ತಿ ಅತ್ಯಂತ ಪವಿತ್ರ ವೃತ್ತಿಯಾಗಿದೆ. ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದುರ ಜತೆಗೆ ವೃತ್ತಿ ಪಾವಿತ್ರತೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಇಂದಿನ ವೈದ್ಯರ ಮೇಲಿದೆ ಎಂದು ಕೆಎಲ್‌ಇ-ಯುಎಸ್‌ಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಅಭಿಮತ ವ್ಯಕ್ತಪಡಿಸಿದರು.

ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ನ್ಯೂಸ್ ಸುದ್ದಿ ವಾಹಿನಿ ಹಾಗೂ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ಸಹಯೋಗದಲ್ಲಿ  ವೈದ್ಯರ ದಿನಾಚರಣೆ ಅಂಗವಾಗಿ ಯಳ್ಳೂರ ರಸ್ತೆಯಲ್ಲಿರುವ ಕೆಎಲ್‌ಇ ಆಸ್ಪತ್ರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ಕೆಎಲ್‌ಇ-ಯುಎಸ್‌ಂ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಉದ್ಘಾಟಿಸಿದರು. ಡಾ.ವಿ.ಡಿ.ಪಾಟೀಲ, ಡಾ.ಆರ್.ಜಿ. ನೇವಲಗಿ, ರಾಜೇಶ್ವರಿ ಕಡಕೋಳ, ರಾಯಣ್ಣ ಆರ್.ಸಿ., ರಘುವೀರ ಕುಲಕರ್ಣಿ, ಪ್ರವೀಣ ಕಲಬಾವಿ, ಡಾ.ಅಜಯ ಕಾಳೆ, ಡಾ.ಆರ್.ಆರ್.ವಾಳ್ವೇಕರ್, ಡಾ.ಅಮಿತ್ ಪಿಂಗಟ್ ಇದ್ದರು.

ವೃತ್ತಿಯಲ್ಲಿ ಯಾವುದೇ ರೋಗಿಗೂ ಮೋಸ ಮಾಡುವುದಿಲ್ಲ ಎಂಬ ಪ್ರತಿಜ್ಞೆ ನಿವೃತ್ತಿಯಾಗುವರೆಗೂ ಪಾಲನೆಯಲ್ಲಿರಬೇಕು. ವೃತ್ತಿ ಜೀವನದುದ್ದಕ್ಕೂ ಸೇವಾ ಮನೋಭಾದ ಜತೆಗೆ ಪರಿಣತಿ, ಕೌಶಲ್ಯತೆ ಮತ್ತು ಅನುಕರಣೆ ಇರಕಲೇ ಬೇಕು ಅಂದಾಗ ಮಾತ್ರ ಜನಸಾಮಾನ್ಯರಿಗೆ ಸೇವೆಯ ಫಲ ದೊರಕಲು ಸಾಧ್ಯ ಎಂದರು.

ಜನತೆ ವೈದ್ಯರನ್ನು ದೇವರಂತೆ ಕಾಣುತ್ತಾರೆ. ಆದರೆ, ವೈದ್ಯ ವೃತ್ತಿಯಲ್ಲಿ ರೋಗಿಗಳೇ ದೇವರು. ವೈದ್ಯರು ಅರ್ಚಕರಿಂದ್ದಂತೆ ಆಸ್ಪತ್ರೆಯೇ ದೇವಾಲಯ. ರೋಗಿಗಳಿಗೆ ಆರೋಗ್ಯ ಸೇವೆ ಒದಗಿಸಲು  ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಶ್ರಮಿಸಬೇಕು. ಕೆಲವು ವೈದ್ಯರ ವರ್ತನೆಯಿಂದಾಗಿ ಶ್ರೀಸಾಮಾನ್ಯರಲ್ಲಿ ವ್ಯತಿರೀಕ್ತ ಮನೋಭಾವ ಬೆಳೆದಿರುವುದು ಕಳವಳಕಾರಿ. ಇಡೀ ವೈದ್ಯಕೀಯ ಕ್ಷೇತ್ರದಲ್ಲಿ ಆದರಣೀಯ ಗುಣಗಳನ್ನು ಅಳವಡಿಸಿಕೊಂಡು ಸೇವೆಗೆ ಪ್ರಥಮ ಆದ್ಯತೆ ನೀಡಿದಾಗಲೇ ಸಾರ್ಥಕವಾಗುತ್ತದೆ ಎಂದು ಪ್ರತಿಪಾಧಿಸಿದರು.  
 

ಚಿಕ್ಕಮಕ್ಕಳ ತಜ್ಞ ವೈದ್ಯ ಡಾ.ವಿ.ಡಿ.ಪಾಟೀಲ ಅವರನ್ನು ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ವತಿಯಿಂದ ಸನ್ಮಾನಿಸಲಾಯಿತು.

 6 ಲಕ್ಷ ಹೊರ ರೋಗಿಗಳಿಗೆ ಸೇವೆ
ಕೆಎಲ್‌ಇ ಆಸ್ಪತ್ರೆಯಲ್ಲಿ ಸಿಗುತ್ತಿರುವ ಆರೋಗ್ಯ ಸೌಲಭ್ಯ ಬೆಳಗಾವಿ ದಕ್ಷಿಣ ಭಾಗದ ಬಡ ಜನತೆಗೂ ಲಭಿಸಬೇಕು ಎಂದು ಉದ್ದೇಶದಿಂದಲೇ ಕೆಎಲ್‌ಇ ಶತಮಾನೋತ್ಸವ ಚಾರಿಟೇಬಲ್ ಆಸ್ಪತ್ರೆ ಸ್ಥಾಪಿಸಲಾಗಿದೆ ಹೊರತು ವಾಣಿಜ್ಯ ಉದ್ದೇಶಕ್ಕಲ್ಲ. ಇಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸೂಕ್ತ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳಡಿಯೂ ಉಚಿತ ಚಿಕಿತ್ಸೆಯ ಸೌಲಭ್ಯವೂ ಇದೆ ಎಂದು ಡಾ.ಎಚ್.ಬಿ.ರಾಜಶೇಖರ ಹೇಳಿದರು.
ಈ ಆಸ್ಪತ್ರೆಯಲ್ಲಿ ಇಲ್ಲಿಯವರೆಗೂ 6 ಲಕ್ಷ ಹೊರ ರೋಗಿಗಳು, 58 ಸಾವಿರ ಒಳರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಅಲ್ಲದೇ 20 ಸಾವಿರ ಶಸ್ತ್ರಚಿಕಿತ್ಸೆ, 5,200 ಹೆರಿಗೆ ಮತ್ತು  600 ಮೊಣಕಾಲು ಹಾಗೂ ಚೆಪ್ಪೆ ಪುನರ್ ಜೋಡಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, 4687 ಡಯಾಲಿಸಿಸ್ ಮಾಡಲಾಗಿದೆ. ಇದೀಗ ಇಲ್ಲಿ ದಿನವೂ 8-10 ಡಯಾಲಿಸಿಸ್ ಹಾಗೂ 4-5 ಹೆರಿಗೆ ನಡೆಯುತ್ತಲಿದ್ದು, ಸಕಾಲಕ್ಕೆ ಆರೋಗ್ಯ ಸೇವೆ ಲಭಿಸುತ್ತಿದೆ. ಅಲ್ಲದೇ, ಉದ್ಯಮ ಬಾಗದ ಸಾವಿರಾರು ಕಾರ್ಮಿಕರಿಗೆ ವೆಲ್‌ನೆಸ್ ಸೆಂಟರ್ ಸಹ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ ಎಂದರು.

ಕೆಎಲ್‌ಇ ಆಸ್ಪತ್ರೆಯ ಹಿರಿಯ ‘ಚಿಕ್ಕಮಕ್ಕಳ ತಜ್ಞ’ ಡಾ.ವಿ.ಡಿ.ಪಾಟೀಲ ಮಾತನಾಡಿ, ರೋಗಿಗಳೊಂದಿಗೆ ವೈದ್ಯರು ಹೆಚ್ಚುಹೊತ್ತು ಮಾತನಾಡಿದಷ್ಟು ಆತ್ಮವಿಶ್ವಾಸ ರೋಗಿಗಳಲ್ಲಿ ಬೆಳೆಯುತ್ತದೆ ಜತೆಗೆ ಕಾಯಿಲೆಯ ಬಗ್ಗೆ ವೈದ್ಯರಿಗೂ ಸ್ಪಷ್ಠತೆ ಸಿಗುತ್ತದೆ. ಇದರಿಂದಾಗಿ ಅಗತ್ಯ ಚಿಕಿತ್ಸೆಯನ್ನು ಅಂತ್ಯಂತ ಪರಿಣಾಮಕಾರಿಯಾಗಿ ನೀಡಲು ಸಹಾಯವಾಗುತ್ತದೆ. ಹೀಗಾಗಿ, ವೈದ್ಯರು ಸಾಧ್ಯವಾದಷ್ಟು ವಿವರವಾಗಿ ರೋಗಿಗಳೊಂದಿಗೆ ಸಂವಹನ ನಡೆಸಬೇಕು ಎಂದರು.

ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸಾರ್ವಜನಿಕರು ಆರೋಗ್ಯ ತಪಾಸಿಸಿಕೊಂಡರು.

ಇಂದು ಎಲ್ಲ ಬಗೆಯ ಕಾಯಿಲೆ ಹಾಗೂ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಜನರು ಅರಿತಿದ್ದಾರೆ. ಎಲ್ಲವನ್ನೂ ಪ್ರಶ್ನಿಸುವುದು ಹಾಗೂ ತಿಳಿಯಲು ಬಯಸುತ್ತಾರೆ. ಗ್ರಾಮೀಣ ಪ್ರದೇಶದ ಜನರು ತಾವು ಅನುಭವಿಸುತ್ತಿರುವ ಸಂಕಟ ಮಾತ್ರ ತಿಳಿಸಿ, ರೋಗ ನಿರ್ಣಯ ಚಿಕಿತ್ಸೆ ಹೀಗೆ ಎಲ್ಲವೂ ವೈದ್ಯರ ಸೂಚನೆಯಂತೆಯೇ ಪಾಲಿಸಲು ಮುಂದಾಗುತ್ತಾರೆ. ಅವರಿಗೂ ಸಹ ಸಂಪೂರ್ಣ ಮಾಹಿತಿ ನೀಡಿ, ಆತ್ಮವಿಶ್ವಾಸ ಮೂಡಿಸಬೇಕು ಹಾಗೂ ಚಿಕಿತ್ಸೆಯ ಆಯ್ಕೆಗಳನ್ನು ಅವರಿಗೇ ನೀಡಬೇಕು. ಹೆಚ್ಚಿನ ಸಂಖ್ಯೆಯ ರೋಗಿಗಳಿಗೆ ಚಿಕಿತ್ಸೆ ನೀಡುವ ಭರದಲ್ಲಿ ರೋಗಿಗಳೊಂದಿಗೆ ಸರಿಯಾಗಿ ಮಾತನಾಡದೇ ಕಾಯಿಲೆ-ಚಿಕಿತ್ಸೆ ನಿರ್ಧರಿಸುವುದು ಸಮಂಜಸವಲ್ಲ. ವೃತ್ತಿಯಲ್ಲಿ ಸೇವೆ ಹೆಚ್ಚಾದಾಗಲೇ ಯಶಸ್ಸುಗಳಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರಾಜೇಶ್ವರಿ ಕಡಕೋಳ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ವಿಆರ್‌ಎಲ್ ಮಿಡಿಯಾ ಪ್ರೈ.ಲಿ ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ಡಾ.ವಿ.ಡಿ.ಪಾಟೀಲ, ಡಾ.ಎಚ್.ಬಿ.ರಾಜಶೇಖರ, ಡಾ.ಆರ್.ಜಿ. ನೇವಲಗಿ, ರಾಜೇಶ್ವರಿ ಕಡಕೋಳ ಅವರನ್ನು ಸನ್ಮಾನಿಸಲಾಯಿತು. ಬೆಳಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಶಿಬಿರದಲ್ಲಿ ನೂರಾರು ಜನ ಆರೋಗ್ಯ ತಪಾಸಿಸಿಕೊಂಡು ವೈದ್ಯರ ಸಲಹೆ ಪಡೆದರು.
ಕಾರ್ಯಕ್ರಮದಲ್ಲಿ ಸ್ಥಾನಿಕ ಸಂಪಾದಕ ರಾಯಣ್ಣ ಆರ್.ಸಿ., ಪ್ರಸರಣ ವಿಭಾಗದ ವ್ಯವಸ್ಥಾಪಕ ರಘುವೀರ ಕುಲಕರ್ಣಿ, ಜಾಹೀರಾತು ಪ್ರತಿನಿಧಿ ಪ್ರವೀಣ ಕಲಬಾವಿ, ಡಾ.ಅಜಯ ಕಾಳೆ, ಡಾ.ಆರ್.ಆರ್.ವಾಳ್ವೇಕರ್, ಡಾ.ಅಮಿತ್ ಪಿಂಗಟ್, ಬೆಳಗಾವಿ ಹಿರಿಯ ನಾಗರಿಕರ ಅಸೋಸಿಯೇಷನ್ ಅಧ್ಯಕ್ಷ  ಗುರುರಾಜ ಶಿಂಧೆ ಹಾಗೂ ಸುರೇಂದ್ರ ದೇಸಾಯಿ ಸೇರಿದಂತೆ ಇತರರಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಅರುಣ ನಿರೂಪಿಸಿದರು. ಸಂತೋಷ ಇಟಪೆ ವಂದಿಸಿದರು.