ಶೃಂಗೇರಿ: ನಮ್ಮ ಸಂಪ್ರದಾಯಕ್ಕೆ ಅನುಗುಣವಾಗಿ ವ್ರತ ವಿಧಾನವನ್ನು ವ್ರತ ಸೌರಭಮ್ ಧಾರ್ಮಿಕ ಪುಸ್ತಕದಲ್ಲಿ ಸಂಗ್ರಹಿಸಿಡಲಾಗಿದ್ದು, ಆಯಾ ವ್ರತವನ್ನು ಸಂಪ್ರಾದಾಯ ಅನುಷ್ಠಾನಿಸುವ ಆಸ್ತಿಕ ಮಹಾಜನರಿಗೆ ಅನುಕೂಲವಾಗುತ್ತದೆ ಎಂದು ಶ್ರೀಶಾರದಾ ಪೀಠದ ಜಗದ್ಗುರು ಶ್ರೀವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಶ್ರೀಮಠದ ಗುರುಭವನದಲ್ಲಿ ಕೆ.ಜಿ.ಗಣೇಶಭಟ್ಟ ಬರೆದ ವ್ರತ ಸೌರಭಮ್‌ಎಂಬ ಧಾರ್ಮಿಕ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಈ ಗ್ರಂಥದಲ್ಲಿ ಅನೇಕ ಪುರಾಣದ ಜತಗೆ ಧರ್ಮಸಿಂಧು, ನಿರ್ಣಯ ಸಿಂಧು, ಸ್ಮತಿ ಕೌಸ್ತುಭ ಮೊದಲಾದ ಪ್ರಮಾಣ ಗ್ರಂಥ ಆಧರಿಸಿ ರಚಿಸಲಾಗಿದೆ. ವರಸಿದ್ಧಿ ವಿನಾಯಕ, ಸ್ವರ್ಣಗೌರಿ,ಅನಂತ ಪದ್ಮನಾಭ ವ್ರತ ಸಹಿತ ವಿಧಾನವನ್ನು ತಿಳಿಸಲಾಗಿದೆ ಎಂದರು.
ಲೇಖಕ ಗಣೇಶ ಭಟ್ ಮಾತನಾಡಿ, ಈ ಪುಸ್ತಕಕ್ಕೆ ಶ್ರೀಮುಖವನ್ನು ದಯಪಾಲಿಸುವುದರ ಜತೆಗೆ ಪುಸ್ತಕದ ಲೋಕಾರ್ಪಣೆಯನ್ನು ಜಗದ್ಗುರುಗಳು ಮಾಡಿರುವುದು ಸಂತೋಷವಾಗಿದೆ. ವ್ರತವೆಂದರೆ ಉದ್ದೇಶಿತ ಕಾರ್ಯಸಿದ್ಧಿಗಾಗಿ ರ್ನಿಷ್ಟ ಕಾಲದಲ್ಲಿ ಉಪವಾಸ, ಪೂಜೆ, ಜಾಗರಾಣೆಗಳ ಮೂಲಕ ಇಷ್ಟ ದೇವತೆಯನ್ನು ಉಪಾಸಿಸುವ ಧಾರ್ಮಿಕ ವಿಧಿಯಾಗಿದೆ. ಇಂಥಹ ವಿಧಿ ಅಂತಃಕರಣವನ್ನು ಶುದ್ಧಿಗೊಳಿಸುವ ಮೂಲಕ ಮೋಕ್ಷಕ್ಕೂ ಸಾಧನವಾಗುತ್ತದೆ ಎಂದರು.
ಜಗದ್ಗುರುಗಳ ಆಪ್ತ ಸಹಾಯಕರಾದ ಕೃಷ್ಣಮೂರ್ತಿ ಭಟ್ಟ ಹಾಗೂ ಶಮಂತಶರ್ಮ, ಶ್ರೀಮಠದ ಪುರೋಹಿತ ವರ್ಗದವರು ಇದ್ದರು.