ವಿಜಯಪುರದ ಮಂಜುನಾಥ ಇಂಡಸ್ಟ್ರಿ ಭವನದಲ್ಲಿ 'ಮನೆಯಂಗಳದಲ್ಲಿ ವಚನ' ಪ್ರಥಮ ಮಾಸಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕ, ಸಾಹಿತಿ ಸಂತೋಷ ಬಂಡೆ, ಆನಂದ ಹುಲಮನಿ, ಈಶ್ವರ ದಿನ್ನಿಮನಿ ಮತ್ತಿತರರಿದ್ದಾರೆ. 
ಜಿಲ್ಲೆ

ಬದುಕಿಗೆ ವಚನಗಳೇ ಮೂಲಾಧಾರ

ವಿಜಯಪುರ: ದೇವರ ದಾಸಿಮಯ್ಯನವರ ವಚನಗಳು ಮನುಷ್ಯನ ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಜೀವನದ ಅನುಭವ ಅವರ ವಚನಗಳಲ್ಲಿ ಕಾಣತ್ತೇವೆ. ಅದರಲ್ಲಿನ ಮೌಲ್ಯಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಶಿಕ್ಷಕ, ಸಾಹಿತಿ ಸಂತೋಷ ಬಂಡೆ ಹೇಳಿದರು.

ನಗರದ ಮಂಜುನಾಥ ಇಂಡಸ್ಟ್ರಿ ಭವನದಲ್ಲಿ ಜಿಲ್ಲಾ ದೇವಾಂಗ ಸಂಘದ ವತಿಯಿಂದ ಭಾನುವಾರ ಸಂಜೆ ಜರುಗಿದ 'ಮನೆಯಂಗಳದಲ್ಲಿ ವಚನ' ಪ್ರಥಮ ಮಾಸಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಜ್ಜನರು, ದೈವಭಕ್ತರು, ಧಾರಾಳತನವುಳ್ಳವರೂ ಆಗಿದ್ದ ದೇವರ ದಾಸಿಮಯ್ಯ ಅವರು ಯಾರೇ ಕಷ್ಟದಲ್ಲಿದ್ದರೂ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಪ್ರತಿಯೊಬ್ಬ ಮಾನವ ಉತ್ತಮ ಸಂಸ್ಕೃತಿ, ಧರ್ಮ, ಆಚಾರದಿಂದ ನಡೆಯಬೇಕೆಂಬ ಸಂದೇಶವನ್ನು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟಿದ್ದಾರೆ ಎಂದರು.

ದಾಸಿಮಯ್ಯನ ವಚನಗಳು ಸಂಕ್ಷಿಪ್ತತೆ, ಸರಳತೆ ಹಾಗೂ ಅರ್ಥವಂತಿಕೆಯನ್ನು ಮುಖ್ಯ ಲಕ್ಷಣವನ್ನಾಗಿಸಿಕೊಂಡು, ಶರಣರ ನುಡಿಗಳ ಮಹತ್ವ, ದಾಂಪತ್ಯಧರ್ಮ, ಸ್ತ್ರೀ-ಪುರುಷ ಸಮಾನತೆ, ಗುರುವಿನ ಶ್ರೇಷ್ಠತೆ, ಒಡಲ ಹಸಿವಿನ ತೀವ್ರತೆ, ದೇವನ ದಾನಗುಣ, ಮಾನವನ ಸ್ವಾರ್ಥ, ಸಮಾಜದ ವೈಪರೀತ್ಯಗಳ ವಿಡಂಬನೆ, ಸರ್ವಸಮಾನತೆಯ ಬಯಕೆಗಳನ್ನು ತುಂಬ ಆತ್ಮೀಯವಾಗಿ ಪ್ರಕಟಿಸುತ್ತವೆ ಎಂದು ಹೇಳಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಆನಂದ ಹುಲಮನಿ ಮಾತನಾಡಿ, ದಾಸಿಮಯ್ಯ ದಂಪತಿ ಸೀರೆ ನೇಯ್ಗೆ ಉದ್ಯೋಗದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ನೇಯ್ಗೆಯನ್ನು ದೇವರ ಕಾರ್ಯದಂತೆ ಆಚರಿಸುತ್ತ ಇತರರಿಗೆ ಮಾದರಿಯಾದವರು. ಅನೇಕ ಮಂದಿಗೆ ಉದ್ಯೋಗ ಕಲಿಸಿ ಜೀವನೋಪಾಯಕ್ಕೆ ದಾರಿ ತೋರಿಸಿದವರು ಎಂದು ಸ್ಮರಿಸಿದರು.

ಜಿಲ್ಲಾ ಖಜಾಂಚಿ ಈಶ್ವರ ದಿನ್ನಿಮನಿ, ಅಪ್ಪಣ್ಣ ಮೇತ್ರೆ, ವಿದ್ಯಾ ದಿನ್ನಿಮನಿ, ರಾಜಶ್ರೀ ಹಟಗಾರ, ವಾಣಿ ವನಕಿ, ಸಂಗೀತಾ ಹುಲಮನಿ, ರವಿ ಕಂಠಿ, ಅಮರೇಶ ಕೋಚಿ, ರೇಖಾ ಹಟಗಾರ ಮತ್ತಿತರರಿದ್ದರು.