ತುಮಕೂರು: ಮೊದಲ ಹಂತದ ಗ್ರಾಪಂ ಚುನಾವಣೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಮತದಾನಕ್ಕೆ ಇನ್ನೂ ಒಂದು ದಿನ ಬಾಕಿ ಇದ್ದು ಸೋಮವಾರ ಅಭ್ಯರ್ಥಿಗಳ ಪಾಲಿಗೆ ನಿರ್ಣಾಯಕವೆನಿಸಲಿದೆ. ಹಣ, ಹೆಂಡ, ಉಡುಗೊರೆ ಮೂಲಕ ಮತಬೇಟೆ ಜೋರಾಗಿದೆ.
ತುಮಕೂರು, ಕುಣಿಗಲ್, ಗುಬ್ಬಿ, ಕೊರಟಗೆರೆ ಹಾಗೂ ಪಾವಗಡ ತಾಲೂಕುಗಳಲ್ಲಿ ಮೊದಲ ಹಂತದ ಚುನಾವಣೆ ಡಿ.22 ರಂದು ನಡೆಯಲಿದೆ.
168 ಗ್ರಾಪಂಗಳ 2,786 ಸ್ಥಾನಗಳಲ್ಲಿ 36 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆ ಆಗಿಲ್ಲ. 156 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು ಇನ್ನುಳಿದ 2594 ಸ್ಥಾನಗಳಿಗೆ ಮಂಗಳವಾರ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮೊದಲ ಹಂತದಲ್ಲಿ ಕಣದಲ್ಲಿರುವ 7142 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಲಿದೆ.
ಮೊದಲ ಹಂತದಲ್ಲಿ ಬರೋಬ್ಬರಿ 156 ಸ್ಥಾನಗಳು ಅವಿರೋಧ ಆಯ್ಕೆಯಾಗುವುದು ಖಚಿತವಾಗಿದ್ದು ಅಧಿಕೃತ ಘೋಷಣೆಯಷ್ಟೇ ಬಾಕಿಯಿದೆ. ತುಮಕೂರು ತಾಲೂಕಿನಲ್ಲಿ 13 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ, ಕುಣಿಗಲ್‌ನಲ್ಲಿ 37, ಗುಬ್ಬಿ 65, ಕೊರಟಗೆರೆ 25 ಹಾಗೂ ಪಾವಗಡ ತಾಲೂಕಿನಲ್ಲಿ 16 ಸ್ಥಾನಗಳು ಒಟ್ಟು 156 ಸ್ಥಾನಗಳಿಗೆ ಏಕಮಾತ್ರ ನಾಮಪತ್ರ ಸಲ್ಲಿಕೆಯಾಗಿದ್ದು ಅವಿರೋಧ ಆಯ್ಕೆ ಘೋಷಣೆ ಮಾಡಬೇಕಿದೆ.
ಮಂಗಳವಾರ ಮತದಾನ: ಡಿ.22 ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಈ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಲು ಗುಂಪುಸೇರದಂತೆ ನಿರ್ದೇಶನ ಸಹ ನೀಡಲಾಗಿದೆ.
5 ತಾಲೂಕುಗಳ 168 ಗ್ರಾಪಂ: ಮೊದಲ ಹಂತದಲ್ಲಿ 5 ತಾಲೂಕುಗಳ 168 ಗ್ರಾಪಂಗಳ 2,594 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ತುಮಕೂರು ತಾಲೂಕಿನ 41 ಗ್ರಾಪಂನ 746 ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು 733 ಸ್ಥಾನಗಳಿಗೆ 2,185 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕುಣಿಗಲ್ ತಾಲೂಕಿನ 36 ಗ್ರಾಪಂ 459 ಸ್ಥಾನಗಳಿಗೆ 1,208 ಅಭ್ಯರ್ಥಿಗಳು, ಗುಬ್ಬಿ ತಾಲೂಕಿನ 34 ಗ್ರಾಪಂನ 525 ಸ್ಥಾನಗಳಿಗಾಗಿ 1,388 ಅಭ್ಯರ್ಥಿಗಳು, ಕೊರಟಗೆರೆ ತಾಲೂಕಿನ 24 ಗ್ರಾಪಂನ 367 ಸ್ಥಾನಗಳಿಗೆ 1,112 ಅಭ್ಯರ್ಥಿಗಳು ಹಾಗೂ ಪಾವಗಡ ತಾಲೂಕಿನ 33 ಗ್ರಾಪಂನ 510 ಸ್ಥಾನಗಳಿಗೆ 1,249 ಅಭ್ಯರ್ಥಿಗಳು ಪೈಪೋಟಿ ನಡೆಸಿದ್ದಾರೆ.
ನಿಷೇಧಾಜ್ಞೆ ಜಾರಿ: ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗ್ರಾಪಂ ಮೊದಲ ಹಂತದ ಚುನಾವಣೆ ನಡೆಯುವ ತಾಲೂಕುಗಳಲ್ಲಿ ಡಿ.21ರ ಬೆಳಗ್ಗೆ 6ರಿಂದ ಡಿ.22ರ ರಾತ್ರಿ 8ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.5 ಜನರ ಮೇಲ್ಪಟ್ಟು ಗುಂಪು ಸೇರುವುದಾಗಲಿ, ಕಾನೂನುಬಾಹಿರ ಚಟುವಟಿಕೆ ನಡೆಸುವಂತಿಲ್ಲ. ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವಂತಿಲ್ಲ.
ಹಳದಿ ಬೋರ್ಡ್ ಟ್ಯಾಕ್ಸಿ ಸುಪರ್ದಿಗೆ !: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ಸಂಜೆಯಿಂದಲೇ ಜಿಲ್ಲೆಯಲ್ಲಿ ಓಡಾಡುತ್ತಿದ್ದ ಹಳದಿ ನಂಬರ್ ಪ್ಲೇಟ್ ಹೊಂದಿರುವ ಕಾರು, ಟಾಟಾ ಸುಮೋ, ಕ್ಲೂಸರ್, ಟೆಂಪೋ ಟ್ರಾವೆಲರ್, ಮಿನಿ ಬಸ್‌ಗಳನ್ನು ಪೊಲೀಸರು ಸುಪರ್ದಿಗೆ ಪಡೆದುಕೊಂಡಿದ್ದಾರೆ. ಇದು ಬಾಡಿಗೆ ಓಡಿಸುವ ಚಾಲಕರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.