ಹೊಸಪೇಟೆ: ಪ್ರಜಾಪ್ರಭುತ್ವ ಗಟ್ಟಿಯಾಗಿ ಬೇರೂರಬೇಕಾದರೆ ಮತದಾನ ಪ್ರಮಾಣ ಹೆಚ್ಚಾಗಬೇಕು. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ಹರಸಾಹಸ ನಡೆಸುತ್ತಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸ್ವೀಪ್ ಸಮಿತಿಗಳನ್ನು ನೇಮಕ ಮಾಡಲಾಗಿದೆ.
ಸ್ವೀಪ್ ಸಮಿತಿಯು ಚುನಾವಣೆ ಮಹತ್ವದ ಕುರಿತು ಅರಿವು ಮೂಡಿಸಿ ಮತದಾನ ಪ್ರಮಾಣ ಹೆಚ್ಚಿಸಲು ಚಟುವಟಿಕೆ ಕೈಗೊಳ್ಳುತ್ತಿದೆ. ಮತದಾನ ನಮ್ಮ ಹಕ್ಕು ಹಾಗೂ ನಮ್ಮೆಲರ ಜವಾಬ್ದಾರಿಯಾಗಿದ್ದು, ನಮ್ಮ ಮತ ಮಾರಾಟಕ್ಕಿಲ್ಲ ಎಂಬ ಘೋಷಣೆಯಡಿ ಜಾತ್ರೆ, ಮದುವೆ, ಸಂತೆ, ಕಾಲೇಜು, ವಿದ್ಯಾರ್ಥಿನಿಲಯ ಮತ್ತಿತರ ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಚುನಾವಣಾ ಮಹತ್ವ ತಿಳಿಸಲು ಭಿತ್ತಿಪತ್ರ, ಜಾಥಾ, ಕರಪತ್ರ ವಿತರಣೆ, ಸಾಂಸ್ಕೃತಿಕ ಚಟುವಟಿಕೆ, ಕಲಾವಿದರು, ಬೀದಿ ನಾಟಕ, ರಂಗೋಲಿ ಬಿಡಿಸುವುದು ಮತ್ತಿತರ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವದ ಅರಿವು ಮೂಡಿಸಲು ಸಮಿತಿ ಶ್ರಮಿಸುತ್ತಿದೆ.
ಮೊದಲ ಹಂತದಲ್ಲಿ ಪ್ರತಿಯೊಂದು ಗ್ರಾಮದಲ್ಲೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಗುಂಪುಗಳ ಸಹಕಾರದಿಂದ ರಂಗೋಲಿ ಸ್ಪರ್ಧೆ ನಡೆಸಿವೆ. ಎರಡನೇ ಹಂತದಲ್ಲಿ ತಾಲೂಕಿನ ಪ್ರತಿಗ್ರಾಮ ಪಂಚಾಯಿತಿ ಕೇಂದ್ರದಲ್ಲೂ ಜಾಗೃತಿ ಜಾಥಾ, ಮೂರನೇ ಹಂತದಲ್ಲಿ ಹೋಬಳಿ ಕೇಂದ್ರಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಜಾಥಾ, ಅಂತಿಮವಾಗಿ ತಾಲ್ಲೂಕು ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸ್ವೀಪ್ ಸಮಿತಿ ಕಾರ್ಯಕ್ರಮ ತೀವ್ರಗೊಳಿಸಲಾಗಿದೆ. ಜಾಗೃತಿ ಕಾರ್ಯಕ್ರಮಗಳಲ್ಲಿ ಮತದಾನದ ದಿನಾಂಕ, ಮತದಾರರಿಗೆ ಮತದಾನ ಕೇಂದ್ರದಲ್ಲಿರುವ ಸೌಲಭ್ಯ, ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ದೊರೆಯುವ ವಿಶೇಷ ಮತದಾನದ ವ್ಯವಸ್ಥೆ, ಮನೆಯಿಂದಲೇ ಮತದಾನ, ಕಡ್ಡಾಯ ಮತದಾನ, ಮತದಾನದಿಂದ ಆಗುವ ಪ್ರಯೋಜನ, ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು ಕಂಡುಹಿಡಿಯುವ ವಿಧಾನ ಮತ್ತಿತರ ವಿಷಯಗಳ ಕುರಿತು ಜಾಗೃತಿ ಅಭಿಯಾನದಲ್ಲಿ ಅರಿವು ಮೂಡಿ ಸುತ್ತಿದ್ದಾರೆ.
ಮತದಾರರು ವಿವಿಧ ಆಸೆ, ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡಿದರೆ ದೇಶ ಮತ್ತು ಪ್ರಜಾಪ್ರಭುತ್ವದ ಭವಿಷ್ಯ ಸಂಕಷ್ಟ ಎದುರಾಗುತ್ತದೆ. ಚುನಾಯಿತ ಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡು ಅವರ ಮೇಲಿನ ಹಿಡಿತ ಕೈತಪ್ಪಿ ಹೋಗುತ್ತದೆ. ಅಂಬೇಡ್ಕರ್ ರಚನೆ ಸಂವಿಧಾನದಿಂದ ಯಾವುದೇ ತಾರತಮ್ಯವಿಲ್ಲದೆ ಸರ್ವರಿಗೂ ಮತದಾನದ ಹಕ್ಕು ದೊರೆತಿದೆ. ಮತದಾನ ಮಾಡುವುದು ಹಕ್ಕು ಮತ್ತು ಕರ್ತವ್ಯವಾಗಿದೆ ಎಂದು ಜಾಗೃತಿ ಮೂಡಿಸಲಾಗುತ್ತಿದೆ.
ನಗರದ ವಿವಿಧ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಮತದಾನ ಜಾಗೃತಿ ಮೂಡಿಸುವ ರಂಗೋಲಿ ಬಿಡಿಸುವುದು, ಪ್ರಜಾಪ್ರಭುತ್ವದ ವ್ಯವಸ್ಥೆ ಕುರಿತು ಉಪನ್ಯಾಸ, ಚರ್ಚಾ ಸ್ಪರ್ಧೆ, ಭಾಷಣ ಮತ್ತು ಪ್ರಬಂಧ ಸ್ಪರ್ಧೆ, ವಿಜೇತರಾದವರಿಗೆ ಬಹುಮಾನ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮತದಾನ ಮಹತ್ವದ ಕುರಿತು ಪ್ರತಿಜ್ಞಾವಿಧಿಯನ್ನು ಸ್ವೀಕರಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾಲೇಜು ವಿದ್ಯಾರ್ಥಿಗಳು ಮತ್ತು ಯುವ ಜನಾಂಗ, ತಾವು ಮತದಾನ ಮಾಡುವುದರ ಜತೆಗೆ ಇತರರಿಗೂ ಮತದಾನದ ಕುರಿತು ಪ್ರೇರೇಪಣೆ ನೀಡುವಂತೆ ಉತ್ತೇಜನ ನೀಡಲಾಗುತ್ತಿದೆ.
ನಗರದ ಮದುವೆ ಕಲ್ಯಾಣ ಮಂಟಪ, ಎಪಿಎಂಸಿ ಯಾರ್ಡ್, ಸಂತೆ, ನಗರದ ವಿವಿಧ ವೃತ್ತಗಳು ಮತ್ತಿತರ ಜನಸಂದಣಿ ಪ್ರದೇಶಗಳಲ್ಲಿ ಮಾನವ ಸರಪಳಿ, ಬೀದಿ ನಾಟಕ ಮತ್ತಿತರ ಚಟುವಟಿಕೆ ಆಯೋಜಿಸಿ ಸ್ವೀಪ್ ತಂಡವು ಮತದಾನದ ಮಹತ್ವದ ಕುರಿತು ಜಾಗೃತಿ ಸಂದೇಶ ನೀಡುತ್ತಿದ್ದಾರೆ.
ಪ್ರಜಾಪ್ರಭುತ್ವದ ಅಡಿಪಾಯ ಗಟ್ಟಿಗೊಳಿಸಲು, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತದಾನ ಮಾಡುವುದರ ಜತೆಗೆ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಾರ್ವಜನಿಕರಿಗೂ ಮತದಾನ ಮಾಡುವಂತೆ ಪ್ರೇರೇಪಿಸಬೇಕು. ಸದಾಶಿವ ಬಿ.ಪ್ರಭು, ಜಿ.ಪಂ. ಸಿಇಒ, ವಿಜಯನಗರ