ಜಿಲ್ಲೆ

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಚಾಲನೆ

ರಮೇಶ ಮೇಳಕುಂದಾ

ಕಲಬುರಗಿ: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ಚಲಾಯಿಸುವ ಪ್ರಕ್ರಿಯೇ ಜಿಲ್ಲೆಯಾದ್ಯಂತ ಗುರುವಾರ ಆರಂಭವಾಯಿತು.

ಗುಲಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 68ರ ವ್ಯಾಪ್ತಿಯ ಮನೆಯೊಂದರಲ್ಲಿ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಹೋಮ್‌ ಮೇಡ್‌ ವೋಟಿಂಗ್ ಮಾಡಿಸುವ ಮೂಲಕ ಮತದಾನಕ್ಕೆ ಚಾಲನೆ ನೀಡಿದರು.

ಗುಲಬರ್ಗಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 18,233 ಹಿರಿಯ ನಾಗರೀಕರು ಮತ್ತು 22,123 ವಿಶೇಷ ಚೇತನರಿದ್ದು, ಇದರಲ್ಲಿ ಕ್ರಮವಾಗಿ 1,149 ಹಿರಿಯ ನಾಗರಿಕರು ಹಾಗೂ 396 ವಿಶೇಷಚೇತನರು ಮನೆಯಿಂದ ಮತದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೆ. ಈಗಾಗಲೆ 12ಡಿ ನಮೂನೆ ಸಹ ವಿತರಿಸಲಾಗಿದೆ ಎಂದು ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಇದಕ್ಕಾಗಿ ಜಿಲ್ಲೆಯಾದ್ಯಂತ ಸುಮಾರು 81 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದೊಂದಿಗೆ ಪಿ.ಆರ್.ಓ, ಎ.ಪಿ‌.ಆರ್.ಓ, ಮೈಕ್ರೋ ವೀಕ್ಷಕರು, ಸೆಕ್ಟರ್ ಅಧಿಕಾರಿಗಳು ಇರಲಿದ್ದು, ಮನೆ‌ ಮನೆಗೆ ಪೋಸ್ಟಲ್ ಬಾಕ್ಸ್ ನೊಂದಿಗೆ ತೆರಳಿ ಮತದಾನ ಮಾಡಿಸಲಿದ್ದಾರೆ. ಈ ಕುರಿತು ಈಗಾಗಲೆ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಗಮನಕ್ಕೂ ತರಲಾಗಿದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.