ಮೈಸೂರು: ಪ್ರಜಾಪ್ರಭುತ್ವ ಉಳಿಯಬೇಕಾದರೆ ಮತದಾನ ಕಡ್ಡಾಯ ಮಾಡಬೇಕು. ಮತದಾರರು ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಬೇಕು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ದಾರಿ ಫೌಂಡೇಷನ್‌ಯಿಂದ ಯುವರಾಜ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಪ್ರಜಾಪ್ರಭುತ್ವದ ರಕ್ಷಣೆ ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ’ ವಿಷಯ ಕುರಿತ ಮುಕ್ತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಿಂದ ಹಿಡಿದು ವಿಧಾನಸಭೆ, ಲೋಕಸಭೆವರೆಗೆ ಯೋಗ್ಯರೇ ಆಯ್ಕೆಯಾಗಬೇಕು. ಯಾವುದೇ ರಾಜಕೀಯ ಪಕ್ಷದವರು ಯೋಗ್ಯರಿಗೆ ಟಿಕೆಟ್ ನೀಡಲಿಲ್ಲ ಎಂದರೆ ಸ್ಥಳೀಯರೇ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸಿ, ಗೆಲ್ಲಿಸಬೇಕು ಎಂದು ಸಲಹೆ ನೀಡಿದರು.
ಮತದಾನ ದಿನ ರಜೆ ನೀಡಿದರೆ ಎಲ್ಲರೂ ಪಿಕ್‌ನಿಕ್, ಪ್ರವಾಸಕ್ಕೆ ಹೋಗುತ್ತಾರೆ. ವಿದ್ಯಾವಂತರೇ ಹೆಚ್ಚಾಗಿ ಈ ಕೆಲಸ ಮಾಡುತ್ತಾರೆ. ಯೋಗ್ಯರು ಇಲ್ಲ ಎಂದು ಮತಗಟ್ಟೆಗೆ ಹೋಗುವುದಿಲ್ಲ. ಕೆಲವರು ಆಮಿಷಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಹನ್ನೆರಡನೇ ಶತಮಾನದ ಬಸವಣ್ಣನವರ ಅನುಭವ ಮಂಟಪವೇ ಇಂದಿನ ಸಂಸತ್ತು ಎಂದು ಹೇಳುತ್ತೇವೆ. ಅಂತಹ ಬಸವಣ್ಣನವರು ಹೇಳಿದ್ದ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ... ಈ ವಚನದ ಎಲ್ಲ ಸಾಲುಗಳನ್ನು ಅನುಸರಿಸಿದ್ದರೆ ಯಾವುದೇ ಸಮಸ್ಯೆ ಎದುರಾಗುತ್ತಿರಲಿಲ್ಲ. ಈಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ ನಡೆಯುತ್ತಿದೆ. ಇಡಿ, ಸಿಬಿಐ, ಚುನಾವಣಾ ಆಯೋಗದ ದುರುಪಯೋಗ ನಡೆಯುತ್ತಿದೆ. ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ನಡೆಯುತ್ತಿದೆ ಎಂದು ವಿಷಾದಿಸಿದರು.
ದೇಶದಲ್ಲಿ ಸಾವಿರಾರು ಜಾತಿಗಳಿವೆ. ಹೀಗಿರುವಾಗ ಸಮಾನತೆ ತರಬೇಕಾದರೆ ಯಾವ್ಯಾವ ಜಾತಿಯವರು ಎಷ್ಟೆಷ್ಟು ಇದ್ದಾರೆ ಎಂಬುದನ್ನು ಪತ್ತೆ ಮಾಡಿ, ಅದರ ಪ್ರಕಾರ ಸೌಲಭ್ಯ ಕಲ್ಪಿಸಬೇಕಾಗಿದೆ. ಹೀಗಾಗಿ ಜಾತಿ ಗಣತಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ವಕೀಲೆ ಎಂ.ಎನ್.ಸುಮನಾ ಮಾತನಾಡಿ, ಪ್ರತಿಯೊಬ್ಬರಿಗೂ ಮಹಾತ್ಮ ಗಾಂಧೀಜಿ ಅವರ ಅಹಿಂಸೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆ, ಬಸವಣ್ಣನವರ ಮಾನವ ಧರ್ಮ ಮುಖ್ಯವಾಗಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಂಕರ್ ಎಂ.ಹುಯಿಲಾಳು ಮಾತನಾಡಿ, ಶತಮಾನೋತ್ಸವ ಹೊಸ್ತಿಲಲ್ಲಿರುವ ಯುವರಾಜ ಕಾಲೇಜಿನಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ ಸಂಬಂಧ ಕುಲಪತಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಮೈಸೂರಿನಲ್ಲಿಯೂ ಮಾದಕವಸ್ತುಗಳ ಬಳಕೆ ಇರಬಹುದು. ಈ ಬಗ್ಗೆ ಪಾಲಕರು, ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಇಂತಹ ಸಾಮಾಜಿಕ ಪಿಡುಗುಗಳ ವಿರುದ್ಧ ಅರಿವು ಮೂಡಿಸಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಮಹದೇವಮೂರ್ತಿ, ಆಡಳಿತಾಧಿಕಾರಿ ಪ್ರೊ.ಕೆ.ಅಜಯ್ ಕುಮಾರ್, ದಾರಿ ಫೌಂಡೇಷನ್ ಅಧ್ಯಕ್ಷ ಎಲ್.ರಂಗಯ್ಯ, ಖಜಾಂಚಿ ವಿಶ್ವನಾಥ್ ಕುಲಕರ್ಣಿ, ಸಂಚಾಲಕ ಪ್ರಭಾಕರ್, ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಹಾಮನೆ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ಡಿ.ಪರಶುರಾಮ ಇತರರಿದ್ದರು.
ನಟ್ಟು-ಬೊಲ್ಟು ಟೈಟ್ ಮಾಡಬಾರದು
ಬಿಗ್‌ಬಾಸ್ ಬಂದ್ ಮಾಡುವ ವಿಚಾರದಲ್ಲಿ ರಾಜಕಾರಣ ಬೇಕಿರಲಿಲ್ಲ. ಪರಿಸರ ನಿಯಮಗಳನ್ನು ಉಲ್ಲಂಘಿಸಿದ್ದರೆ ಸ್ಟುಡಿಯೋ ಮಾಲೀಕನ ವಿರುದ್ಧ ಕ್ರಮ ಜರುಗಿಸಬೇಕೆ ಹೊರತು ಇನ್ನಾರದೋ ನಟ್ಟು-ಬೊಲ್ಟು ಟೈಟ್ ಮಾಡಲು ಹೋಗಬಾರದಿತ್ತು ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾರ್ಮಿಕವಾಗಿ ಹೇಳಿದರು.
ಯಾವುದೇ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಆಚೆ ಬಂದಾಗ ಹಾರ-ತುರಾಯಿ ಹಾಕಿ ಸ್ವಾಗತಿಸಬಾರದು ಎಂದರು.