ಆಲಮೇಲ: ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಬೆಳವಣಿಗೆ ಮತ್ತು ಭವಿಷ್ಯದ ಹಿತ ಕಾಪಾಡಿಕೊಳ್ಳಬೇಕಾದರೆ ಮತದಾನ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಜಿ.ವಿ. ಹಣ್ಣಿಕೇರಿ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಪಟ್ಟಣದ ಪಂಚಾಯಿತಿ ಆವರಣದಲ್ಲಿ ಗುರುವಾರ ಜಿಲ್ಲಾ ಹಾಗೂ ತಾಲೂಕು ಆಡಳಿತ, ತಾಲೂಕು ಸ್ವಿಪ್ ಸಮಿತಿ, ಪಪಂ ಸಹಯೋಗದಲ್ಲಿ ಅಂಗವಿಕಲರ ಕಲ್ಯಾಣ ಸಂಘದಿಂದ ಏರ್ಪಡಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗಿ ತಮ್ಮ ಪವಿತ್ರ ಮತ ಮಾರಿಕೊಳ್ಳಬಾರದು. ನಿಮ್ಮ ಒಂದು ಮತದಿಂದ ಈ ರಾಜ್ಯದ ಭವಿಷ್ಯವನ್ನೇ ಬದಲಿಸಬಹುದು. ಮತದಾರರು ನಿರ್ಭಯವಾಗಿ ಮತ ಚಲಾಯಿಸಬೇಕು ಎಂದರು.
ನಂತರ ಪಟ್ಟಣ ಪಂಚಾಯಿತಿ ಆವರಣದಿಂದ ಅಂಗವಿಕಲರ ಕಲ್ಯಾಣ ಸಂಘದ ಪದಾಧಿಕಾರಿಗಳು ನಗರದಲ್ಲಿ ತಮ್ಮ ತ್ರಿಚಕ್ರದ ಮೋಟಾರ್ ಸೈಕಲ್ ಜಾಥಾ ನಡೆಸಿ ಜಾಗೃತಿ ಮೂಡಿಸಿದರು.
ಪಪಂ ಅಧಿಕಾರಿ ಬಿ.ಜೆ. ನಾರಾಯಣಕರ, ಲಾಲಸಾಬ ದೇವರಮನಿ, ಸಚಿನ್ ಸಿಂಪಿ, ಪ್ರದೀಪ ದಳವೆ, ಅಂಗವಿಕಲರಾದ ಖಾಜಪ್ಪ ಭೋವಿ, ಸಿದ್ದು ಕಲ್ಲೂರ, ಶಮಶುದ್ದೀನ್ ಬೆಣ್ಣೆಶಿರೂರ, ಈರಣ್ಣ ಕುಂಬಾರ, ಸೈಬಣ್ಣ ಪೂಜಾರಿ, ಮಾಯಪ್ಪ ಪೂಜಾರಿ, ಕರೇಪ್ಪ ಪೂಜಾರಿ, ಮಲಕಪ್ಪ ಬ್ಯಾಕೋಡ, ಅಣ್ಣಪ್ಪ ಅಂಬೋರೆ, ಪೌರ ಕಾರ್ಮಿಕರು ಇದ್ದರು.