ಜಿಲ್ಲೆ

ಮತ ಚಲಾಯಿಸುವುದು ಸಂವಿಧಾನಿಕ ಕರ್ತವ್ಯ

ಮಂಜುನಾಥ ತಿಮ್ಮಯ್ಯ

ಮೈಸೂರು: ಚುನಾವಣಾ ಹಬ್ಬದಲ್ಲಿ ಎಲ್ಲ ಹೆಣ್ಣು ಮಕ್ಕಳು ಪಾಲ್ಗೊಂಡು ತನ್ನ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಜಿಲ್ಲಾ ಸತ್ರ ಹಾಗೂ ಪ್ರಧಾನ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ್ ತಿಳಿಸಿದರು.


ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಮತದಾನದ ಜಾಗೃತಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ನಮ್ಮದು ಪ್ರಜಾಪ್ರಭುತ್ವ ದೇಶ. ನಮ್ಮ ಹಕ್ಕನ್ನು ಚಲಾಯಿಸುವುದು ನಮ್ಮ ಜವಾಬ್ದಾರಿ. ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ಇದು ಸಂವಿಧಾನದ ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ಮತದಾನ ಜಾಗೃತಿಯ ಪ್ರಮಾಣವನ್ನು ಹೆಚ್ಚಿಸಬೇಕು ಎಂದರು


ಪ್ರತಿ ಹೆಣ್ಣು ಮಗುವು ಜನಿಸುವ ಪೂರ್ವದಿಂದಲೂ ಅದನ್ನು ರಕ್ಷಿಸಲು ಕಾನೂನುಗಳಿವೆ. ಜಗತ್ತಿನಲ್ಲಿ ಪುರುಷ -ಮಹಿಳೆ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಯಾವುದೇ ಅಸಮಾನತೆ, ತಾರತಮ್ಯ ಮಾಡಬಾರದು. ತೊಟ್ಟಿಲು ತೂಗುವ ಕೈ ದೇಶವನ್ನು ತೂಗುತ್ತದೆ. ನಮ್ಮ ಮತ ನಮ್ಮ ಹಕ್ಕು. ಪ್ರತಿಯೊಬ್ಬ ಮಹಿಳಾ ಮತದಾರರು ಮತ ಹಾಕಬೇಕು ಎಂದರು


ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪುರುಷನಂತೆ ಮಹಿಳೆ ಕೂಡ ಎಲ್ಲ ಕ್ಷೇತ್ರಗಳಲ್ಲೂ ತನ್ನ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದು. ಮಹಿಳೆ ಪುರುಷನಿಗೆ ಸಮಾನಳಲ್ಲ ಆಕೆ ಪುರುಷನಿಗಿಂತಲೂ ಒಂದು ಹೆಜ್ಜೆ ಮುಂದೆ ಇದ್ದಾಳೆ. ಮನೆಯನ್ನು ಮುನ್ನೆಡೆಸುವ ಮಹಿಳೆ ದೇಶವನ್ನು ಮುನ್ನೆಡಸಲು ಸಹಕಾರಿಯಾಗಿರುತ್ತಾಳೆ. ಪ್ರತಿಯೊಬ್ಬ ಮಹಿಳೆಯೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದರು


ಮಹಿಳೆಯರಲ್ಲಿ ಹೆಚ್ಚಿನ ಶಕ್ತಿ ಇದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಮನೆಯಲ್ಲಿ ಮಕ್ಕಳನ್ನು ಗಂಡು, ಹೆಣ್ಣು ಎಂಬ ತಾರತಮ್ಯ ಮಾಡದೆ ಇಬ್ಬರಿಗೂ ಒಂದೇ ರೀತಿಯ ಸಮಾನತೆಯನ್ನು ನೀಡಿ ಬೆಳೆಸಬೇಕು ಎಂದರು.


ಜಿಲ್ಲೆಯಲ್ಲಿ ಮಹಿಳಾ ಮತದಾನವೇ ಜಾಸ್ತಿಯಿದ್ದು, ಈ ಬಾರಿಯೂ ಸಹ ಪ್ರತಿಶತ ನೂರರಷ್ಟು ಮಹಿಳಾ ಮತದಾನ ಆಗಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಜಾಗೃತವಾಗಿ, ನೈತಿಕವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಹಾಗೆಯೇ ಇತರ ಸಾರ್ವಜನಿಕರಿಗೆ ಮತದಾನ ಮಾಡುವಂತೆ ಪ್ರೇರೇಪಣೆ ಮಾಡಬೇಕು ಎಂದು ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಮಾತನಾಡಿ, ಪ್ರತಿಯೊಂದು ಕ್ಷೇತ್ರದಲ್ಲೂ ಹೆಣ್ಣು ಸ್ವಾಭಿಮಾನಿಯಾಗಿ ದುಡಿಯುತ್ತ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯರು ಮತದಾನದಲ್ಲಿ ಹಿಂದುಳಿಯುತ್ತಿದ್ದಾರೆ. ಹೀಗಾಗಿ ಅವರಿಗೆ ಮತದಾನದ ಮಹತ್ವವನ್ನು ತಿಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದರು.


ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮಾತನಾಡಿ, ಪ್ರತಿಯೊಬ್ಬ ಮಹಿಳೆಯು ಒಂದು ಶಕ್ತಿ. ಯಾವುದಕ್ಕೂ ಹೆದರದೆ ಧೈರ್ಯವಾಗಿ ಸಮಸ್ಯೆಯನ್ನು ಎದುರಿಸಬೇಕು. ನಮ್ಮ ಕಷ್ಟಗಳಿಗೆ ನಾವೇ ಪರಿಹಾರ ಕಂಡುಕೊಳ್ಳಬೇಕು. ಉತ್ತಮ ಅಭ್ಯರ್ಥಿಯನ್ನು ನಾವೇ ಆಯ್ಕೆ ಮಾಡುವ ಅವಕಾಶವಿದೆ. ಆದ್ದರಿಂದ ಎಲ್ಲರೂ ಸಹ ಕಡ್ಡಾಯವಾಗಿ ಮತದಾನ ಮಾಡಿ ಎಂದು ತಿಳಿಸಿದರು.


ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಆಕಾಶವಾಣಿ ವತಿಯಿಂದ ಮತದಾನದ ಮಹತ್ವ ಕುರಿತು ಆಯೋಜಿಸಲಾಗಿದ್ದ ಪ್ರಬಂಧ ರಚನೆ, ರಸಪ್ರಶ್ನೆ, ರೀಲ್ಸ್ ಹಾಗೂ ಚಿತ್ರಕಲಾ ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.


ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಸಿಸಿಎಫ್ ಮಾಲತಿ ಪ್ರಿಯಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರವಾಲ್, ಸಿಎಫ್‌ಟಿಆರ್‌ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣಸಿಂಗ್, ಕೇಂದ್ರ ಸರ್ಕಾರದ ಚುನಾವಣಾ ಮಾಹಿತಿ ಅಧಿಕಾರಿಗಳಾದ ಶ್ರುತಿ, ಚುನಾವಣಾ ರಾಯಭಾರಿಯಾದ ತನಿಷ್ಕಾ ಮೂರ್ತಿ, ವಿವಿಧ ಇಲಾಖೆಗಳ ಮಹಿಳಾ ಅಧಿಕಾರಿಗಳು ಇದ್ದರು