ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ನಡೆದ ಮತದಾನ ಗ್ರಾಮೀಣ ಭಾಗದಲ್ಲಿ ಚುರುಕಿನಿಂದ ಕೂಡಿತ್ತು. ಬಹುತೇಕ ಎಲ್ಲ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆಯಿತು.
ಹುಬ್ಬಳ್ಳಿ ತಾಲೂಕು ಹಾಗೂ ಕುಂದಗೋಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮತದಾನ ತುರುಸಿನಿಂದ ಕೂಡಿತ್ತು. ಹುಬ್ಬಳ್ಳಿ ತಾಲೂಕಿನ ಅದರಗುಂಚಿ, ನೂಲ್ವಿ, ಕುಂದಗೋಳ ಹಾಗೂ ತಾಲೂಕಿನ ಬೆನಕನಹಳ್ಳಿ, ಚಿಕ್ಕನತಿರ್, ರೊಟ್ಟಿಗವಾಡ ಮುಂತಾದ ಗ್ರಾಮಗಳಲ್ಲಿ ಮತದಾನ ಶಾಂತಿಯುತವಾಗಿತ್ತು.
ಬೆಳಗ್ಗೆಯಿಂದಲೇ ಜನರು ಮತಗಟ್ಟೆಗಳತ್ತ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಅಂಗವಿಕಲರು, ಹಿರಿಯ ನಾಗರಿಕರು ಸಹ ಮೊಮ್ಮಕ್ಕಳು, ಮಕ್ಕಳ ನೆರವಿನೊಂದಿಗೆ ಆಗಮಿಸಿ ಕರ್ತವ್ಯ ಪ್ರಜ್ಞೆ ಮೆರೆದರು.
ಬಿಸಿಲಿಗೂ ಜಗ್ಗಲಿಲ್ಲ:
ಮಧ್ಯಾಹ್ನ 12 ಗಂಟೆ ಹೊತ್ತಿಗೆ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರೂ ಮತದಾರರು ತಮ್ಮ ಹಕ್ಕು ಚಲಾವಣೆಗೆ ಆಗಮಿಸಿದರು. ಹಾಗಾಗಿ ಮಧ್ಯಾಹ್ನದ ಬಿಸಿಲಿನಲ್ಲೂ ಮತಗಟ್ಟೆಗಳ ಎದುರು ಮತದಾರರು ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು.
ಅಂಗವಿಕಲ ಮತದಾರ ಅಶೋಕ, ಅಂಗವಿಕಲರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಇತ್ತು. ಆದರೆ, ಈ ಅವಕಾಶ ಪಡೆಯಲು ಸಾಧ್ಯವಾಗಲಿಲ್ಲ. ಇದೀಗ ಎಲ್ಲರೊಂದಿಗೆ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದು ಖುಷಿ ತಂದಿದೆ ಎಂದರು.
ಯುವ ಉತ್ಸಾಹ:
ಯುವ ಮತದಾರರು, ಇದೇ ಮೊದಲ ಬಾರಿ ತಮ್ಮ ಹಕ್ಕು ಚಲಾಯಿಸಲು ಆಗಮಿಸಿದವರಲ್ಲಿ ಉತ್ಸಾಹ ಉಕ್ಕಿ ಹರಿಯುತ್ತಿತ್ತು. ಮತದಾನದ ಹೊಸ ಅನುಭವ ಅವರಿಗೆ ಮುದ ನೀಡಿತ್ತು. ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಪಾಲುದಾರರಾದ ಖುಷಿ ಅವರಲ್ಲಿತ್ತು.
ಅನೇಕ ಯುವಕರು ಅಂಜಿಕೆ, ಅಳುಕಿಲ್ಲದೇ ಇವಿಎಂನಲ್ಲಿ ಮತದಾನ ಮಾಡಿದರು. ಪ್ರಜಾಪ್ರಭುತ್ವದ ದೊಡ್ಡ ಹಬ್ಬ ಮತದಾನ ಪ್ರಕ್ರಿಯೆಯಲ್ಲಿ ಯುವ ಮತದಾರರು ಪಾಲ್ಗೊಂಡು ಸಂಭ್ರಮಿಸಿದರು. ಹುಬ್ಬಳ್ಳಿ ತಾಲೂಕಿನ ನೂಲ್ವಿಯ ವೇದಾ, ಕುಂದಗೋಳದ ಬೆನಕನಹಳ್ಳಿಯ ಸೌಭಾಗ್ಯ, ಚಿಕ್ಕನತಿರ್ಯ ಸ್ಪೂತಿರ್ ಹಾಗೂ ಸಹನಾ ಗೋಣಿ ಸೇರಿ ಅನೇಕರು ಮೊದಲ ಬಾರಿ ಮತದಾನ ಮಾಡಿದ ಅನುಭವ ಹಂಚಿಕೊಂಡರು.
ಕುಟುಂಬಸಮೇತ ಮತದಾನ:
ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದ ಕೊಪ್ಪದ ಕುಟುಂಬದ ಸುಮಾರು 96 ಜನರು ಏಕಕಾಲಕ್ಕೆ ಆಗಮಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಪ್ರತಿ ಚುನಾವಣೆಯಲ್ಲಿಯೂ ಇವರು ಕುಟುಂಬದ ಎಲ್ಲರೂ ಸೇರಿ ಮತದಾನ ಮಾಡುತ್ತಾರೆ. ಕೊಪ್ಪದ ಕುಟುಂಬದ ಪೂಜಾ, ಸರಸ್ವತಿ ಹಾಗೂ ಮಂಗಳಾ ಕೊಪ್ಪದ ಅವರು ಮೊದಲ ಬಾರಿಗೆ ಮತ ಚಲಾಯಿಸಿ ಸಂತೋಷ ಹಂಚಿಕೊಂಡರು.
ಇದೇ ರೀತಿ ಗ್ರಾಮೀಣ ಭಾಗದಲ್ಲಿ ತಂಡ ತಂಡವಾಗಿ ಕುಟುಂಬದವರು, ಅಕ್ಕಪಕ್ಕದವರು ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದು ಕಂಡು ಬಂತು.
ಸಖಿ ಮತಗಟ್ಟೆ ಕೇಂದ್ರ
ಮಹಿಳೆಯರ ಮತದಾನ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅಲ್ಲಲ್ಲಿ ಸಖಿ ಮತಗಟ್ಟೆ ಆರಂಭಿಸಿದ್ದು, ಕುಂದಗೋಳದ ಸಖಿ ಮತಗಟ್ಟೆ ಗಮನ ಸೆಳೆಯಿತು. ಅನೇಕ ಮಹಿಳೆಯರು ಇಲ್ಲಿ ಸರದಿಯಲ್ಲಿ ನಿಂತು ಮತದಾನ ಮಾಡಿದರು.
ಮತಗಟ್ಟೆ ಹೊರಗಡೆ ಗುಲಾಬಿ ಬಣ್ಣದ ಪೆಂಡಾಲ್ ಹಾಕಲಾಗಿತ್ತು. ಮತಗಟ್ಟೆ ಕೇಂದ್ರದ ಕೊಠಡಿಯನ್ನು ಗುಲಾಬಿ ಬಣ್ಣದಿಂದ ಅಲಂಕರಿಸಲಾಗಿತ್ತು. ಹೂಗಳಿಂದ ಶೃಂಗರಿಸಲಾಗಿತ್ತು. ಮತಗಟ್ಟೆಯಲ್ಲಿ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು.
ಕುಂದಗೋಳದಲ್ಲಿ ಅಂಗವಿಕಲರಿಗಾಗಿ ವಿಶೇಷಚೇತನರ ಮತಗಟ್ಟೆ ತೆರೆಯಲಾಗಿತ್ತು.
85 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡುವುದಾಗಿ ಚುನಾವಣಾ ಆಯೋಗ ತಿಳಿಸಿತ್ತು. ಆದರೂ, ಕೆಲವರು ಇದರ ಪ್ರಯೋಜನ ಪಡೆಯದೇ ನೇರವಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ನೂಲ್ವಿಯಲ್ಲಿ 80 ವರ್ಷ ಮೇಲ್ಪಟ್ಟ ಯಲ್ಲವ್ವ ತೋಟದ, ಬಸವ್ವ ನೀಲಪ್ಪಗೌಡ್ರ ಮತದಾನ ಮಾಡಿದರು.