ಜಿಲ್ಲೆ

ತುರುಸಿನಿಂದ ನಡೆದ ಮತದಾನ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಏರ್ಪಡಿಸಿದ್ದ ಚುನಾವಣೆಯಲ್ಲಿ ಮತದಾನ ಅತ್ಯಂತ ತುರುಸಿನಿಂದ ನಡೆದಿದ್ದು, ತಡರಾತ್ರಿವರೆಗೂ ಮತ ಎಣಿಕೆ ಕಾರ್ಯ ನಡೆದಿದೆ.
1 ಅಧ್ಯಕ್ಷ, 20 ಸಾಮಾನ್ಯ ಹಾಗೂ 10 ಮಹಿಳಾ ಕಾರ್ಯನಿರ್ವಾಹಕ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸಭಾದ 2850 ಸದಸ್ಯರ ಪೈಕಿ 1977 ಸದಸ್ಯರು ಮತ ಚಲಾಯಿಸಿದ್ದಾರೆ. ಮತದಾನ ಬಳಿಕ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ತಡರಾತ್ರಿವರೆಗೂ ನಡೆದಿದೆ.
ನಗರದಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಬಿಟ್ಟು ಬಿಡದೆ ಸುರಿದ ಮಳೆಯಲ್ಲಿ ಬಹುತೇಕ ಸದಸ್ಯರು ಮತ ಚಲಾಯಿಸಲು ಆಗಮಿಸಿದ್ದರಿಂದ ಸ್ಪರ್ಧೆ ತುಸು ಬಿರುಸಿನಿಂದಲೇ ಕೂಡಿತ್ತು. ಅಧ್ಯಕ್ಷ ಸ್ಥಾನಕ್ಕೆ ಹಂಗಾಮಿ ಅಧ್ಯಕ್ಷ ಗುರುರಾಜ ಹುಣಸಿಮರದ, ಸಿದ್ದಪ್ಪ ಕಂಬಾರ ಹಾಗೂ ಪ್ರದೀಪಗೌಡ ಪಾಟೀಲ ಸ್ಪರ್ಧೆ ನಡೆಸಿದ್ದಾರೆ. ಮೂವರು ಸ್ಪರ್ಧೆ ನಡೆಸಿದ್ದರೂ ಪ್ರದೀಪಗೌಡ ಪಾಟೀಲ ಹಾಗೂ ಗುರುರಾಜ ಹುಣಸಿಮರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಪ್ರದೀಪಗೌಡ ಪಾಟೀಲಗೆ ಶಾಸಕರಾದ ಅರವಿಂದ ಬೆಲ್ಲದ, ವಿನಯ ಕುಲಕರ್ಣಿ ಸಹ ಬೆಂಬಲ ನೀಡಿದ್ದರಿಂದ ಈ ಚುನಾವಣೆ ಫಲಿತಾಂಶ ಕುತೂಹಲ ಕೆರಳಿಸಿದೆ.