ಜಿಲ್ಲೆ

ಗ್ರಾಪಂ ಕಾರ್ಯಾಲಯ ಸ್ಥಳಾಂತರಕ್ಕೆ ಮತದಾನ

ಕೋಲಾರ ಡೆಸ್ಕ್

ಮುಳಬಾಗಿಲು: ಮಜರಾ ಗಡ್ಡೂರುನಿಂದ ಮುದಿಗೆರೆ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ಕಾರ್ಯಾಲಯವನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿ ಕಳೆದ 12 ದಿನಗಳಿಂದ ನಡೆಯುತ್ತಿರುವ ಅನಿಧಿಷ್ಟಾವಧಿ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಸೂಚನೆಯಂತೆ ಶುಕ್ರವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಸರ್ವೇಶ್​ ಅವರು ಭೇಟಿ ನೀಡಿ ಗ್ರಾಪಂ ವ್ಯಾಪ್ತಿಯ 18 ಗ್ರಾಮಗಳ ಎಲ್ಲ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು, ಸ್ವಯಂಸೇವಾ ಸಂ, ಮಹಿಳಾ ಸಂಘಟನೆಗಳು, ಯುವಕ ಸಂಘಗಳಿಂದ ಸಲಹೆ&ಸೂಚನೆಗಳನ್ನು ಪಡೆದರು.

ತಾಲೂಕಿನ ಮುದಿಗೆರೆ ಮಜರಾ ಗಡ್ಡೂರು ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂಭಾಗ ವಿಶೇಷ ಗ್ರಾಮ ಸಭೆ ಹಮ್ಮಿಕೊಂಡು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ಸಭೆ ಏರ್ಪಡಿಸಲಾಗಿದೆ. ಗ್ರಾಪಂ ಕಾರ್ಯಾಲಯವನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿ ತಾಲೂಕು ದಲಿತ ಸಂಘರ್ಷ ಸಮಿತಿಯಿಂದ ತಾಪಂ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿ ಮುದಿಗೆರೆ ಮತ್ತು ಮಜರಾ ಗಡ್ಡೂರು ಗ್ರಾಮದವರ ಪರ&ವಿರೋಧ ಮತದಾನ ಮಾಡುವ ಮೂಲಕ ಸಲ್ಲಿಸಬೇಕೆಂದು ಸೂಚನೆ ನೀಡಿದರು.

ಗಡ್ಡೂರು ಗ್ರಾಮದಲ್ಲಿ ಮುಂದುವರಿಯಬೇಕು ಎಂದು 541 ಮತ ಬಂದರೆ, ಮುದಿಗೆರೆಯಲ್ಲಿ ತೆರೆಬೇಕೆಂದು 95 ಮತಗಳು ಬಂದಿದ್ದು, ಅಂತಿಮ ನಿರ್ಧಾರಕ್ಕೆ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಕಳಿಸಿಕೊಡುವ ಬಗ್ಗೆ ಸಭೆಯಲ್ಲಿ ತೀಮಾರ್ನಿಸಲಾಯಿತು.

ತಾಪಂ ಆಡಳಿತಾಧಿಕಾರಿ ಶಿವಕುಮಾರ್​, ಸಹಾಯಕ ನಿರ್ದೇಶಕ ಆರ್​. ರವಿಚಂದ್ರ, ಡಿವೈಎಸ್​ಪಿ ಡಿ.ಸಿ. ನಂದಕುಮಾರ್​, ಪೊಲೀಸ್​ ಸಿಪಿಐಗಳಾದ ಕೆ.ಜಿ.ಸತೀಶ್​, ಎನ್​.ರಾಜಣ್ಣ, ಪಿಎಸ್​ಐಗಳಾದ ಅರ್ಜುನ್​ಗೌಡ, ವಿಠಲ್​ ವೈ. ತಳವಾರ್​, ಎಲ್​. ಮಮತಾ, ಅಣ್ಣಯ್ಯ ಇದ್ದರು.

ಅಧಿಕಾರಿಗಳು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಬೇಡಿಕೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ ಮುದಿಗೆರೆ ಗ್ರಾಮಕ್ಕೆ ಮಂಜುರಾಗಿದ್ದು, 33 ವರ್ಷಗಳಿಂದ ಶೇ.100 ದಲಿತರಿರುವ ಗ್ರಾಮಕ್ಕೆ ವಂಚನೆ ಮಾಡಲಾಗಿದೆ. ಈಗ ತಾಪಂ, ಜಿಪಂ ಚುನಾವಣೆ ಬರುತ್ತಿದ್ದು, 18 ಗ್ರಾಮಗಳ ಜನರನ್ನು ಎತ್ತಿ ಕಟ್ಟಿ ಎಲ್ಲ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು ಅವರ ಅಣತಿಯಂತೆ ನಡೆಯುತ್ತಿದ್ದಾರೆ. ಎಲ್ಲ ಗ್ರಾಮಸ್ಥರನ್ನು ಸಭೆಗೆ ಕರೆದಿರುವುದರಿಂದ ನಮಗೆ ನ್ಯಾಯ ಸಿಗುವುದಿಲ್ಲ ಎಂಬ ಕಾರಣಕ್ಕೆ ಮುದಿಗೆರೆ ಗ್ರಾಮಸ್ಥರೊಂದಿಗೆ ನಾವು ಬಹಿಷ್ಕಾರ ಮಾಡಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ್ದೇವೆ.

- ಮೆಕಾನಿಕ್​ ಜಿ. ಶ್ರೀನಿವಾಸ್​

ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಂಚಾಲಕ