ಜಿಲ್ಲೆ

ಹಣೆಬರಹ ಬರೆಯಲಿರುವ ಮತದಾರರು: ಇಂದು ಪರಿಷತ್ ಚುನಾವಣೆಗೆ ಮತದಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಜೂ.3ರಂದು ಮತದಾನ ನಡೆಯಲಿದೆ. ಅಂತೆಯೇ ಜಿಲ್ಲೆಯ 5,403 ಮತದಾರರು ಅಭ್ಯರ್ಥಿಗಳ ಹಣೆಬರಹ ಬರೆಯಲು ಸಜ್ಜಾಗಿದ್ದಾರೆ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆ ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣಾ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯದಲ್ಲಿ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕಾರಣ ಪ್ರಮುಖ ಪಕ್ಷದ ಇಬ್ಬರು ಅಭ್ಯರ್ಥಿಗಳು ಜಿಲ್ಲೆಯವರೇ ಆಗಿರುವುದು. ಆದ್ದರಿಂದ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದರೆ, ದಳಕ್ಕೆ ಅಸ್ಥಿತ್ವದ ಪ್ರಶ್ನೆಯಾಗಿದೆ.

5,403 ಅರ್ಹ ಮತದಾರರು: ಜಿಲ್ಲೆಯಲ್ಲಿ ಮತ ಚಲಾಯಿಸುವ ಹಕ್ಕನ್ನು 5,403 ಮತದಾರರು ಪಡೆದಿದ್ದಾರೆ. ಕೆ.ಆರ್.ಪೇಟೆ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-327, ಮಹಿಳೆ-137 ಸೇರಿದಂತೆ ಒಟ್ಟು 464 ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ನಾಗಮಂಗಲ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-296, ಮಹಿಳೆ-147 ಸೇರಿ ಒಟ್ಟು 443 ಮತದಾರರು, ಪಾಂಡವಪುರ ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-260, ಮಹಿಳೆ-186 ಸೇರಿ ಒಟ್ಟು 446 ಮತದಾರರು, ಮಂಡ್ಯ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-573, ಮಹಿಳೆ-611 ಸೇರಿದಂತೆ ಒಟ್ಟು 1184 ಮತದಾರರು, ಮಂಡ್ಯ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಮತ ಕೇಂದ್ರದಲ್ಲಿ ಪುರುಷ-458, ಮಹಿಳೆ-343 ಸೇರಿ ಒಟ್ಟು 801 ಮತದಾರರು, ಮದ್ದೂರು ಮಿನಿ ವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-554, ಮಹಿಳೆ-413 ಸೇರಿ ಒಟ್ಟು 967 ಮತದಾರರು, ಶ್ರೀರಂಗಪಟ್ಟಣ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-207, ಮಹಿಳೆ-224 ಸೇರಿ ಒಟ್ಟು 431 ಮತದಾರರು ಹಾಗೂ ಮಳವಳ್ಳಿ ಮಿನಿವಿಧಾನಸೌಧ ಮತ ಕೇಂದ್ರದಲ್ಲಿ ಪುರುಷ-452, ಮಹಿಳೆ- 215 ಸೇರಿ ಒಟ್ಟು 667 ಮತದಾರರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.

ಮತದಾನಕ್ಕೆ ಪರ್ಯಾಯ ದಾಖಲೆಗಳು: ಮತದಾನ ಬೆಳಗ್ಗೆ 8 ಗಂಟೆಯಿಂದ ಸಂಜೆ 4 ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅರ್ಹ ಮತದಾರರು ಮತಚಲಾಯಿಸಲು ದಾಖಲೆ ಹಾಜರುಪಡಿಸುವುದು ಕಡ್ಡಾಯವಾಗಿದೆ. ಅದರಂತೆ ಚುನಾವಣಾ ಆಯೋಗ ಈಗಾಗಲೇ ಸೂಚನೆ ನೀಡಿದೆ.

ಪ್ರಮುಖವಾಗಿ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿಯನ್ನು ಮುಖ್ಯ ದಾಖಲಾತಿಯಾಗಿ ಹಾಜರುಪಡಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದವರು ಎಪಿಕ್ ಕಾರ್ಡ್ ಹೊಂದಿಲ್ಲದಿದ್ದಲ್ಲಿ ಅಂತಹವರು ಭಾರತ ಚುನಾವಣಾ ಆಯೋಗವು ನಿರ್ಧರಿಸಿರುವ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಭಾರತೀಯ ಪಾಸ್ ಪೋರ್ಟ್, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಅಥವಾ ಇತರ ಪ್ರಧಾನ ಕೈಗಾರಿಕಾ ಮನೆಗಳು ತನ್ನ ಉದ್ಯೋಗಿಗಳಿಗೆ ನೀಡಿದ ಸೇವಾ ಗುರುತಿನ ಚೀಟಿ, ಚುನಾಯಿತ ಸಂಸದರು, ಶಾಸಕರು, ಎಂಎಲ್‌ಸಿಗಳಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆಗಳು ನೀಡಿದ ಸರ್ವಿಸ್ ಗುರುತಿನ ಚೀಟಿ, ವಿಶ್ವವಿದ್ಯಾಲಯದಿಂದ ನೀಡಲಾಗಿರುವ ಪದವಿ/ಡಿಪ್ಲೊಮಾ ಒರಿಜಿನಲ್ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರವು ನೀಡಿದ ದೈಹಿಕ ಅಂಗವಿಕಲತೆಯ ಪ್ರಮಾಣಪತ್ರ, ಕೇಂದ್ರ ಸರ್ಕಾರ ನೀಡಿರುವ ವಿಶಿಷ್ಟ ಅಂಗವೈಕಲ್ಯ ಹೊಂದಿರುವವರಿಗೆ ಯುಡಿಐಡಿ ಗುರುತಿನ ಕಾರ್ಡ್ ಅಥವಾ ಇತರೆ ಪೂರಕ ದಾಖಲಾತಿಗಳ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ.