ಸದೇಶ್ ಕಾರ್ಮಾಡ್ ಮೈಸೂರು
ಪ್ರಜಾಪ್ರಭುತ್ವದ ಬಹುದೊಡ್ಡ ಹಬ್ಬವಾಗಿರುವ ಲೋಕಸಭಾ ಚುನಾವಣೆಗೆ ಏ.26 ರಂದು ಮತದಾನ ನಡೆಯಲಿದೆ. ಮತದಾನ ಮಾಡುವ ಸಂದರ್ಭ ಮತದಾರರಲ್ಲಿ ಯಾವುದೇ ರೀತಿಯ ಗೊಂದಲಗಳು ಉಂಟಾಗದಂತೆ ಎಚ್ಚರ ವಹಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯು ಈ ಬಾರಿ ಜಿಲ್ಲೆಯ ವಿವಿಧೆಡೆ ಅಣಕು ಮತದಾನ ಪ್ರಾತ್ಯಕ್ಷಿಕೆಯ ಮೂಲಕ ಗಮನ ಸೆಳೆದಿದೆ.
ಪ್ರಥಮ ಬಾರಿಗೆ ಮತದಾನ ಮಾಡುವ ಯುವ ಮತದಾರರಲ್ಲಿ ಹಲವಾರು ಗೊಂದಲಗಳು ಇರುತ್ತವೆ. ಈ ಗೊಂದಲಗಳನ್ನು ಅಣಕು ಮತದಾನ ಪ್ರಾತ್ಯಕ್ಷಿಕೆಯ ಮೂಲಕ ಪರಿಹರಿಸಲಾಗಿದೆ. ಅದೇ ರೀತಿ ಮತದಾನ ಮಾಡುವ ಕುರಿತು ಗೊಂದಲ ಇರುವ ಮತದಾರರನ್ನು ಗುರುತಿಸಿ ಅವರಿಗೂ ತರಬೇತಿ ನೀಡಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 2,04,960 ಜನರು ಅಣಕು ಮತದಾನ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿ ಸಿದ್ದಾರೆ. ವಿದ್ಯುನ್ಮಾನ ಮತಯಂತ್ರ (ಇವಿಎಂ) ಮೂಲಕ ಯಾವ ರೀತಿ ಮತದಾನ ಮಾಡಬೇಕು ಎಂದು ಮತದಾರರಿಗೆ ಅರಿವು ಮೂಡಿಸಲಾಗಿದೆ. ಇದಕೋಸ್ಕರ ಒಟ್ಟು 144 ಇವಿಎಂಗಳನ್ನು ಬಳಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 27.20 ಲಕ್ಷ ಮತದಾರರು ಇದ್ದು, ಈ ಪೈಕಿ 2 ಲಕ್ಷ ಮತದಾರರನ್ನು ನೇರವಾಗಿ ತಲುಪಿ ಅವರಿಗೆ ತರಬೇತಿ ನೀಡಿರುವುದು ದೊಡ್ಡ ಸಾಧನೆಯೇ ಸರಿ.
ಮತದಾನ ಕುರಿತು ಇರುವ ಗೊಂದಲ ಪರಿಹರಿಸುವ ಸಲುವಾಗಿ ಈ ಬಾರಿ ಚುನಾವಣೆ ಘೋಷಣೆಯಾಗುವ ಮುನ್ನವೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಜಿಲ್ಲೆಯಲ್ಲಿ ಮತದಾರರಿಗೆ ಮತದಾನ ಜಾಗೃತಿ ಮೂಡಿಸುವ ಕಾರ್ಯ ಪ್ರಾರಂಭವಾಯಿತು. ವಿದ್ಯುನ್ಮಾನ ಮತಯಂತ್ರ (ಇವಿಎಂ) ಹಾಗೂ ಮತದಾನ ಖಾತ್ರಿ ಯಂತ್ರ (ವಿವಿ ಪ್ಯಾಟ್) ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಮತದಾರರಿಗೆ ತಿಳಿಸಿಕೊಡಲಾಯಿತು.
ಇವಿಎಂನಲ್ಲಿ ನಮ್ಮ ಅಭ್ಯರ್ಥಿಯನ್ನು ಗುರುತಿಸಿ ಯಾವ ರೀತಿ ಮತ ಚಲಾಯಿಬೇಕು ಹಾಗೂ ಮತ ಚಲಾಯಿಸಿದ ನಂತರ ನಾವು ಮತಚಲಾಯಿಸಿದ ವ್ಯಕ್ತಿಗೆ ಮತ ಚಲಾಣೆಯಾಗಿದೆಯೇ ಎಂದು ಖಾತ್ರಿ ಪಡಿಸಿಕೊಳ್ಳಲು ವಿವಿ ಪ್ಯಾಟ್ ಅನ್ನು ಗಮನಿಸುವಂತೆ ಮತದಾರರಿಗೆ ತಿಳಿಸಿಕೊಡುವ ಕಾರ್ಯ ಮಾಡಲಾಗಿದೆ. ಈ ಅಣಕು ಮತದಾನ ಪ್ರಾತ್ಯಕ್ಷಿಕೆಯು ಕೇವಲ ನಗರ, ಪಟ್ಟಣಗಳಿಗೆ ಮಾತ್ರ ಸೀಮಿತಗೊಳ್ಳದೆ ಹಳ್ಳಿಗಳಲ್ಲೂ ಯಶಸ್ವಿಯಾಗಿ ನಡೆಸಲಾಗಿದೆ.
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಣಕು ಮತದಾನ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಈ 11 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಮತದಾರರು ಇದ್ದಾರೆ. ಪಿರಿಯಾಪಟ್ಟಣದಲ್ಲಿ 755 ಅಣಕು ಮತದಾನ ಪ್ರಾತ್ಯಕ್ಷಿಕೆ ನಡೆಸಿ 19,712 ಮತದಾರರಿಗೆ ತರಬೇತಿ ನೀಡಲಾಗಿದೆ. ಅದೇ ರೀತಿ ಕೆ.ಆರ್. ನಗರ ಕ್ಷೇತ್ರದಲ್ಲಿ 729 ಪ್ರಾತ್ಯಕ್ಷಿಕೆ ನಡೆಸಿ 15,634 ಮತದಾರರಿಗೆ, ಹುಣಸೂರು ಕ್ಷೇತ್ರದಲ್ಲಿ 754 ಪ್ರಾತ್ಯಕ್ಷಿಕೆ ನಡೆಸಿ 16,369 ಮತದಾರರಿಗೆ, ಎಚ್.ಡಿ. ಕೋಟೆಯಲ್ಲಿ 773 ಪಾತ್ಯಕ್ಷಿಕೆ ನಡೆಸಿ 15,679 ಮತದಾರರಿಗೆ, ನಂಜನಗೂಡಿನಲ್ಲಿ 698 ಪ್ರಾತ್ಯಕ್ಷಿಕೆ ನಡೆಸಿ 14,537 ಮತದಾರರಿಗೆ, ಚಾಮುಂಡೇಶ್ವರಿಯಲ್ಲಿ 843 ಪ್ರಾತ್ಯಕ್ಷಿಕೆ ನಡೆಸಿ 22,463, ಕೃಷ್ಣರಾಜದಲ್ಲಿ 794 ಪ್ರಾತ್ಯಕ್ಷಿಕೆ ನಡೆಸಿ 23,651 ಮತದಾರರಿಗೆ, ಚಾಮರಾಜದಲ್ಲಿ 708 ಪ್ರಾತ್ಯಕ್ಷಿಕೆ ನಡೆಸಿ 24,378 ಮತದಾರರಿಗೆ, ನರಸಿಂಹರಾಜದಲ್ಲಿ 779 ಪ್ರಾತ್ಯಕ್ಷಿಕೆ ನಡೆಸಿ 21,862 ಮತದಾರರಿಗೆ, ವರುಣದಲ್ಲಿ 733 ಪ್ರಾತ್ಯಕ್ಷಿಕೆ ನಡೆಸಿ 14,328 ಜನರಿಗೆ, ತಿ.ನರಸೀಪುರದಲ್ಲಿ 688 ಪ್ರಾತ್ಯಕ್ಷಿಕೆ ನಡೆಸಿ 16,367 ಜನರಿಗೆ ತರಬೇತಿ ನೀಡಲಾಗಿದೆ. ಈ ಪ್ರಾತ್ಯಕ್ಷಿಕೆಗೆ ಪಿರಿಯಾಪಟ್ಟಣ, ನಂಜನಗೂಡು ಮತ್ತು ಚಾಮರಾಜದಲ್ಲಿ ತಲಾ 12, ಕೆ.ಆರ್.ನಗರ, ವರುಣ ಮತ್ತು ಕೃಷ್ಣರಾಜದಲ್ಲಿ ತಲಾ 13, ಹುಣಸೂರು, ಎಚ್.ಡಿ. ಕೋಟೆ ಮತ್ತು ನರಸಿಂಹರಾಜದಲ್ಲಿ ತಲಾ 14, ಚಾಮುಂಡೇಶ್ವರಿಯಲ್ಲಿ 17, ತಿ.ನರಸೀಪುರದಲ್ಲಿ 11 ಇವಿಎಂಗಳನ್ನು ಬಳಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 8,324 ಅಣಕು ಮತದಾನದ ಪ್ರಾತ್ಯಕ್ಷಿಕೆ ನಡೆಸಲಾಗಿದೆ.
ಮತದಾನ ಅಣಕು ಪ್ರಾತ್ಯಕ್ಷಿಕೆ ಜತೆಗೆ ಮತದಾರರಲ್ಲಿ ಮತದಾನದ ಮಹತ್ವ ಹಾಗೂ ಅರಿವು ಮೂಡಿಸಲು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಯಶಸ್ವಿಯಾಗಿ ಆಯೋಜಿಸಲಾಗಿದೆ. ವಿಂಟೇಜ್ ಕಾರುಗಳ ರ‌್ಯಾಲಿ, ಟಾಂಗಾ ಗಾಡಿಗಳ ಸವಾರಿ, ಸಹಿ ಸಂಗ್ರಹ, ಮತದಾನ ಹಬ್ಬ, ಚಿತ್ರಕಲಾ ಸ್ಪರ್ಧೆ, ಎತ್ತಿನ ಗಾಡಿ ಮೆರವಣಿಗೆ, ಬೈಕ್ ರ‌್ಯಾಲಿ ಸೇರಿದಂತೆ ಹತ್ತು ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಬಾರಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.
ಮತದಾರರಲ್ಲಿ ಮತದಾನದ ಮಹತ್ವ ಹಾಗೂ ಅರಿವು ಮೂಡಿಸಲು ಚುನಾವಣಾ ಆಯೋಗವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲಾಗಿದೆ. ಪ್ರತಿಯೊಬ್ಬ ಮತದಾರರು ಅದರಲ್ಲೂ ಯುವ ಮತದಾರರ ಗಮನ ಸೆಳೆಯುವ ಕಾರ್ಯವನ್ನು ಹೆಚ್ಚಾಗಿ ಮಾಡಲಾಗಿದೆ. ಮತದಾನ ಸಂದರ್ಭ ಯಾವುದೇ ರೀತಿಯ ಗೊಂದಲ ಉಂಟಾಗಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮನದಾನ ಅಣಕು ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಅಲ್ಲದೆ ಮತದಾರರ ಮನೆ ಮನೆಗಳಿಗೆ ಮತದಾರರ ಚೀಟಿಯನ್ನು ನೀಡಿ ಕಡ್ಡಾಯವಾಗಿ ಏ.26 ರಂದು ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ಡಾ.ಕೆ.ವಿ. ರಾಜೇಂದ್ರ, ಜಿಲ್ಲಾ ಚುನಾವಣಾಧಿಕಾರಿ