ಮಡಿಕೇರಿ: ಕರ್ನಾಟಕ ವಿಧಾನಸಭಾ ಚುನಾವಣೆ-೨೦೨೩ರ ಹಿನ್ನೆಲೆಯಲ್ಲಿ ಮತದಾರರ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶದಿಂದ ಏ.೩೦ ರಂದು ಮೊಬೈಲ್ ಲೈಟ್ ಬೆಳಗಿಸಿ ನಾನು ವೋಟ್ ಹಾಕುವೆ ಎಂಬ ಸಂದೇಶ ಸಾರುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಡಾ.ಎಸ್.ಆಕಾಶ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾಡಳಿತ, ಕೊಡಗು ಜಿಲ್ಲಾ ಸ್ವೀಪ್ ಸಮಿತಿ, ಮಡಿಕೇರಿಯಲ್ಲಿನ ರೋಟರಿ ಸಂಸ್ಥೆಗಳ ಸಹಯೋಗದಲ್ಲಿ ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏ.೩೦ ರಂದು ಸಂಜೆ ೬.೩೦ ಗಂಟೆಗೆ ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ(ಮ್ಯಾನ್ಸ್ ಕಾಂಪೌಂಡ್) ನೂರಾರು ಜನರು ನಿಗದಿತ ಸ್ಥಳದಲ್ಲಿ ಸಾಲಾಗಿ ನಿಂತು ಮೊಬೈಲ್ ಲೈಟ್ ಬೆಳಗಿಸಿ ನಾನು ವೋಟ್ ಹಾಕುವೆ ಎಂಬ ಸಂದೇಶ ಸಾರಲಾಗುವುದು.
ವಿನೂತನ ರೀತಿಯಲ್ಲಿ ಆಯೋಜಿಸಿರುವ ಮತದಾರರ ಶಿಕ್ಷಣ, ಅರಿವು ಹಾಗೂ ಜಾಗೃತಿ ಕಾರ್ಯಕ್ರಮದ ಸಂದರ್ಭದಲ್ಲಿ ವಿಶೇಷವಾಗಿ ಸಂಜೆ ೭.೧೫ ರಿಂದ ೩೦ ನಿಮಿಷಗಳ ಕಾಲ ಸರಿಗಮಪ ಲಿಟಲ್ ಚಾಂಪ್ ರಿಯಾಲಿಟಿ ಶೋ ನಲ್ಲಿ ಪ್ರಥಮ ಸ್ಥಾನ ಪಡೆದ ಪ್ರಗತಿ ಬಡಿಗೇರ್ ಹಾಗೂ ಅವರ ತಂದೆ ಬಸವರಾಜ ಬಡಿಗೇರ್ ಸಹೋದರಿ ಪ್ರತಿಕ್ಷಾ ಬಡಿಗೇರ್ ಅವರಿಂದ ಹಾಡುಗಾರಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಸಾರ್ವಜನಿಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಎಂದು ಡಾ.ಎಸ್.ಆಕಾಶ್ ತಿಳಿಸಿದ್ದಾರೆ.