ಮದ್ದೂರು: 18 ವರ್ಷ ಮೇಲ್ಪಟ್ಟ ಅರ್ಹ ಮತದಾರರು ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯಬೇಕು ಎಂದು ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದ ಸಂವಿಧಾನ ಮತದಾನ ಮಾಡುವ ಅಮೂಲ್ಯ ಹಕ್ಕು ನೀಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮಾಡುವುದು ಅತ್ಯಂತ ಜವಾಬ್ದಾರಿಯ ಕೆಲಸವಾಗಿದೆ. ನಮ್ಮನ್ನಾಳುವ ಪ್ರಭುಗಳನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಸೌಭಾಗ್ಯ ನಮ್ಮದಾಗಿರುವುದರಿಂದ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಮದ್ದೂರು ತಾಲೂಕಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಶಾಂತಿಯುತ ಚುನಾವಣೆ ನಡೆಸಲು ಕ್ರಮ ವಹಿಸಲಾಗಿದೆ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಈ ಪ್ರಕ್ರಿಯೆಯಿಂದ ದೂರ ಉಳಿಯಬಾರದು. ಶೇ. 100 ರಷ್ಟು ಮತದಾನ ನಡೆಯಲು ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ತಾಪಂ ಇಒ ಜಿ.ಡಿ.ಮಂಜುನಾಥ ಮಾತನಾಡಿ, ಮದ್ದೂರು ತಾಲೂಕಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಡ್ಡಾಯವಾಗಿ ಮತದಾನ ಮಾಡುವಂತೆ ಯುವಕರು ಮತ್ತು ನಾಗರಿಕರನ್ನು ಪ್ರೇರೇಪಿಸಲಾಗಿದೆ. ಯುವ ಮತದಾರರು ಮೋಜು, ಮಸ್ತಿಗೆ ಮಹತ್ವ ನೀಡದೆ ಮತದಾನ ಮಾಡಲು ಮುಂದಾಗಬೇಕು. ಮತದಾನ ಪ್ರಜಾಪ್ರಭುತ್ವದ ಜೀವಾಳ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ರಂಗೋಲಿ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರ ಹಾಗೂ ಬಿತ್ತಿಪತ್ರಗಳೊಂದಿಗೆ ಮತದಾರರಿಗೆ ಜಾಗೃತಿ ಮೂಡಿಸಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತಪ್ಪದೇ ಮತದಾನ ಮಾಡಿ ಎಂದು ಘೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಬಿಇಒ ಸಿ.ಎಚ್.ಕಾಳಿರಯ್ಯ, ತಾಲೂಕು ಮಟ್ಟದ ಅಧಿಕಾರಿಗಳಾದ ಕೆ.ಎಂ.ರೇಖಾ, ಡಿ. ಪರಮೇಶ, ನಾರಾಯಣ್, ಟಿ.ವಿ.ಮಂಜುನಾಥ, ಕಲಾವಿದರಾದ ಆಲದಹಳ್ಳಿ ಮಂಜುಳಾ, ಚಾಮನಹಳ್ಳಿ ಮಂಜು, ರಾಮಪ್ಪ, ಅಂಬರಹಳ್ಳಿ ಸ್ವಾಮಿ, ಕರಡಕೆರೆ ವಸಂತ ಇತರರು ಇದ್ದರು.