ಜಿಲ್ಲೆ

ಆರೋಗ್ಯ ಇಲಾಖೆಯಿಂದ ಮತದಾನ ಅರಿವು; ಚೀಟಿಗಳಲ್ಲಿ ಧ್ಯೇಯ ವ್ಯಾಕ್ಯ ಮುದ್ರಿಸಿ ಸಾರ್ವಜನಿಕರಿಗೆ ಜಾಗೃತಿ

ಅವಿನಾಶ್ ಜೈನಹಳ್ಳಿ ಮೈಸೂರು
18 ವರ್ಷ ತುಂಬಿದ ಎಲ್ಲರಿಗೂ ಮತದಾನದ ಮೂಲಕ ತನ್ನ ಕ್ಷೇತ್ರದ ಜನಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಸಂವಿಧಾನ ಕಲ್ಪಿಸಿದ್ದು, ಯೋಗ್ಯರನ್ನು ಆಯ್ಕೆ ಮಾಡುವ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಬೇಕು ಎಂದು ಆರೋಗ್ಯ ಇಲಾಖೆಯು ಕೂಡ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಜನರು ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎನ್ನುವ ಜಾಗೃತಿಯನ್ನು ಮೂಡಿಸಲು ಆರೋಗ್ಯ ಇಲಾಖೆಯು ಸಲಹಾ ಚೀಟಿಗಳಲ್ಲಿ ‘ಧ್ಯೇಯ ವಾಕ್ಯ’ಗಳನ್ನು ಮುದ್ರಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.

ಲೋಕಸಭಾ ಚುನಾವಣೆಯ ಮತದಾನ ಏ.26ರಂದು ನಡೆಯಲಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳಬೇಕಾದರೆ ಚುನಾವಣೆಯಲ್ಲಿ ಮತದಾರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ. ಪಾಲ್ಗೊಳ್ಳುವಿಕೆ ಮಾತ್ರ ಹೆಚ್ಚಾದರೆ ಸಾಲದು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆದು ಯೋಗ್ಯ ಅಭ್ಯರ್ಥಿಗಳ ಆಯ್ಕೆ ಕೂಡ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೂಡ ಮತದಾನ ಪ್ರಮಾಣ ಹೆಚ್ಚಿಸಲು ಮುಂದಾಗಿದೆ.

ಮೈಸೂರು ಜಿಲ್ಲಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ, ತಾಲೂಕು ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬರುವ ರೋಗಿಗಳಿಗೆ ನೀಡುವ ಹೊರರೋಗಿ ಚೀಟಿ, ಸಲಹಾ ಚೀಟಿಗಳಲ್ಲಿ ‘ಚುನಾವಣಾ ಪರ್ವ ದೇಶದ ಗರ್ವ’ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ, ‘ಏ.26ರಂದು ನಮ್ಮ ನಡಿಗೆ ಮತದಾನ ಕೇಂದ್ರದ ಕಡೆಗೆ’ಎನ್ನುವ ಧ್ಯೇಯ ವಾಕ್ಯಗಳನ್ನು ಮುದ್ರಿಸಲಾಗಿದೆ. ಇದಲ್ಲದೆ ಒಳರೋಗಿಯಾಗಿ ದಾಖಲಾಗುವವರ ಕೇಸ್ ಸೀಟ್‌ನಲ್ಲೂ ಕೂಡ ಮುದ್ರಿಸಲಾಗಿದೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಶುರುವಾದ ದಿನದಿಂದಲೂ ಆರೋಗ್ಯ ಇಲಾಖೆಯು ತಾನು ನಿರ್ವಹಿಸುವ ಪತ್ರ ವ್ಯವಹಾರಗಳು, ಕಡತಗಳು, ಲೆಟರ್‌ಹೆಡ್‌ಗಳಲ್ಲೂ ಕೂಡ ಧ್ಯೇಯ ವಾಕ್ಯವನ್ನು ಮುದ್ರಿಸಲಾಗಿದ್ದು, ಮತದಾನ ಕುರಿತು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ.

ಸಮಿತಿ ಮೂಲಕ ಜಾಗೃತಿ:

ಮೈಸೂರು ಜಿಲ್ಲೆಯಲ್ಲಿ 926 ಗ್ರಾಮೀಣ ಆರೋಗ್ಯ, ನೈರ್ಮಲ್ಯ ಹಾಗೂ ಪೌಷ್ಟಿಕತಾ ಸಮಿತಿಗಳು ಇವೆ. ಈ ಸಮಿತಿಯಲ್ಲಿ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಇರುತ್ತಾರೆ. ಇವರು ಕಾಲ-ಕಾಲಕ್ಕೆ ಗುಂಪು ಸಭೆಗಳನ್ನು ನಡೆಸಿ ಜನರಿಗೆ ಆರೋಗ್ಯದ ಅರಿವು ಮೂಡಿಸುತ್ತಾರೆ. ಪ್ರಸ್ತುತ ಚುನಾವಣಾ ಸಮಯವಾಗಿರುವುದರಿಂದ ಈಗ ನಡೆಸುವ ಗುಂಪು ಸಭೆಗಳಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಮತದಾನ ಏಕೆ ಮಾಡಬೇಕು. ಸರ್ಕಾರಗಳು ಹೇಗೆ ರಚನೆಯಾಗುತ್ತವೆ. ಆಮಿಷಗಳಿಗೆ ಒಳಗಾಗಿ ಮತದಾನ ಮಾಡಿದರೇ ಮುಂದಿನ ಪರಿಣಾಮಗಳು ಹೇಗೆ ಇರುತ್ತವೆ ಎನ್ನುವುದನ್ನು ಜನರಿಗೆ ತಿಳಿಯುವಂತೆ ಹೇಳಲಾಗುತ್ತಿದೆ. ಈ ಸಭೆಗಳಲ್ಲಿ ಆಯಾ ಗ್ರಾಮದಲ್ಲಿ ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಯುವಕ-ಯುವತಿ ಅಥವಾ ವಿಚಾರಗಳ ಬಗ್ಗೆ ತಿಳಿದುಕೊಂಡಿರುವ ವ್ಯಕ್ತಿಗಳಿಂದ ಮತದಾನ ಕುರಿತು ಸಣ್ಣ ಭಾಷಣಗಳನ್ನು ಮಾಡಿಸುವ ಮೂಲಕ ಜನರನ್ನು ಜಾಗೃತಗೊಳಿಸಲಾಗುತ್ತಿದೆ.

ಜಿಲ್ಲೆಯಲ್ಲಿ ತೀವ್ರತರನಾದ ಉಷ್ಣಾಂಶವಿರುವುದರಿಂದ ಪ್ರತಿ ಹಳ್ಳಿ-ಹಳ್ಳಿಯಲ್ಲೂ ಮನೆ-ಮನೆಗೆ ಭೇಟಿ ನೀಡಿ, ಜನರ ಆರೋಗ್ಯದ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಬೇಸಿಗೆಯಾದ್ದರಿಂದ ಆಹಾರ ಪದಾರ್ಥಗಳು ಬೇಗನೆ ಹಳಸಿಹೋಗುತ್ತವೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಆಹಾರವನ್ನು ಸಿದ್ಧಪಡಿಸಿಕೊಂಡು, ಬಿಸಿ-ಬಿಸಿಯಾಗೇ ಸೇವಿಸಬೇಕು. ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. ಹೊರಗಡೆ ಆಹಾರವನ್ನು ಅದಷ್ಟು ಮಟ್ಟಿಗೆ ದೂರವಿಡಬೇಕು. ಬಿಸಲಾಘಾತದಿಂದ ತಪ್ಪಿಸಿಕೊಳ್ಳಲು ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ತಿಳಿಸುವ ಜತೆಯಲ್ಲೇ ಮತದಾನದ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಕಿಟ್ ವಿತರಣೆ:

ಮತದಾನ ನಡೆಯುವ ಪ್ರತಿಯೊಂದು ಕೇಂದ್ರಕ್ಕೂ ತುರ್ತು ಅಗತ್ಯವಿರುವ ಔಷಧಗಳನ್ನು ಒಳಗೊಂಡಿರುವ ಮೆಡಿಕಲ್ ಕಿಟ್ ಅನ್ನು ನೀಡಲಾಗುತ್ತದೆ. ಅದರಲ್ಲಿ ಒಆರ್‌ಎಸ್ ದ್ರಾವಣದ ಪೊಟ್ಟಣ, ಅಗತ್ಯ ಮಾತ್ರೆಗಳು, ಕೆಲವು ಲಸಿಕೆಗಳು ಇರುತ್ತವೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗೆ ಅಥವಾ ಮತದಾನ ಮಾಡಲು ಹೋಗುವ ಜನರಿಗೆ ದಿಢೀರನೆ ಆರೋಗ್ಯದಲ್ಲಿ ಏರುಪೇರು ಆದರೆ ಪ್ರಾಥಮಿಕವಾಗಿ ಬೇಕಾಗಿರುವ ಔಷಧಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಉದ್ಯೋಗದಲ್ಲಿರುವವರು ಚುನಾವಣೆಯಿಂದ ವಿಮುಖರಾಗುತ್ತಿರುವುದು ಕಳವಳಕಾರಿ ಸಂಗತಿ. ಮತದಾನ ಎಂಬುದು ಅಖಂಡ ಪ್ರಜಾ ಸಮೂಹದ ದನಿ. ಪ್ರತಿ ಪ್ರಜೆಯೂ ತನ್ನನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡಲು ಇರುವ ವ್ಯವಸ್ಥೆಯೇ ಮತದಾನ. ಪ್ರಜಾತಂತ್ರ ದೇಶದ ಪ್ರಜೆಗಳ ಪ್ರಮುಖ ಹಕ್ಕು ಕೂಡ ಹೌದು. ತಮ್ಮ ಒಳಿತನ್ನು ಬಯಸುವ ಜನಪರ ನಾಯಕನನ್ನು ತಾವೇ ಆಯ್ಕೆ ಮಾಡಿ ಕಳುಹಿಸಲು ಮತದಾನ ಎಂಬ ಪ್ರಕ್ರಿಯೆಯಾಗಿದೆ. ದೇಶಕ್ಕೆ ಒಳಿತು ಮಾಡುವ ನಾಯಕನನ್ನು ಚುನಾಯಿಸುವುದು ಪ್ರಜೆಗಳ ಜವಾಬ್ದಾರಿ. ಗ್ರಾಮೀಣ ಪ್ರದೇಶಗಳಿಂತ ನಗರ ಪ್ರದೇಶಗಳಲ್ಲಿ ಕಡಿಮೆ ಮತದಾನ ಆಗುತ್ತದೆ. ವಿದ್ಯಾವಂತರೇ ಹೆಚ್ಚಿರುವ ನಗರ ಪ್ರದೇಶದಲ್ಲಿ ಮತದಾನವನ್ನು ಕಡೆಗಣಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಜನರು ಹೆಚ್ಚು ವಿದ್ಯಾವಂತರಾದಂತೆ ಮತದಾನದ ಕಡೆ ನಿರ್ಲಕ್ಷ್ಯ ತೋರುತ್ತಿರುವುದು ಬೇಸರದ ಸಂಗತಿ. ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಮತದಾನ ಪ್ರಮಾಣ ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆ ಕೂಡ ಮತದಾನದ ಜಾಗೃತಿ ಮೂಡಿಸುತ್ತಿದೆ.

ಮತದಾರರು ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಲು ಚುನಾವಣಾ ಆಯೋಗ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ನಮ್ಮ ಇಲಾಖೆ ಕೂಡ ಮತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸದಲ್ಲಿ ಭಾಗಿಯಾಗಿರುವುದು ನಮಗೆ ಹೆಮ್ಮೆ ಎನಿಸುತ್ತಿದೆ. ಈ ರೀತಿ ಜಾಗೃತಿ ಕಾರ್ಯಕ್ರಮವನ್ನು ಮಾಡುವ ಮೂಲಕ ಚುನಾವಣೆಯ ಹಬ್ಬದ ಸಂಭ್ರಮದಲ್ಲಿ ಆರೋಗ್ಯ ಇಲಾಖೆಯು ಪಾಲ್ಗೊಳ್ಳುತ್ತಿದೆ.ಡಾ.ಪಿ.ಕುಮಾರಸ್ವಾಮಿಜಿಲ್ಲಾ ಆರೋಗ್ಯ ಅಧಿಕಾರಿ