ವಿಜಯಪುರ: ತಾಲೂಕಿನ ಹಿಟ್ನಳ್ಳಿ ಗ್ರಾಮದಲ್ಲಿ ದಿ ಪ್ರೆಸೆಡೆನ್ಸಿ ಶಿಕ್ಷಣ ಮಹಾವಿದ್ಯಾಲಯದ ಎನ್ಎಸ್ಎಸ್ ಶಿಬಿರಾರ್ಥಿಗಳಿಂದ ಈಚೆಗೆ ಮತದಾನ ಮಹತ್ವದ ಕುರಿತು ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನ ಅಧಿಕಾರಿ ಡಾ. ಪ್ರಕಾಶ್ ರಾಠೋಡ ಮತ್ತು ಜಿಲ್ಲಾ ಚುನಾವಣಾ ರಾಯಭಾರಿ ರಾಜು ಪವಾರ ಜಾಥಾಗೆ ಚಾಲನೆ ನೀಡಿದರು.
ಗ್ರಾಮದ ಮಾರುತೇಶ್ವರ ದೇವಸ್ಥಾನ ಬಳಿ ನೂರಕ್ಕೂ ಹೆಚ್ಚು ಎನ್ಎಸ್ಎಸ್ ಶಿಬಿರಾರ್ಥಿಗಳು ಮತದಾನ ಜಾಗೃತಿ ಮೂಡಿಸುವ ಜತೆಗೆ ಪಂಚಾಯತಿ ಮತಗಟ್ಟೆ ಸಂಖ್ಯೆ 284 ರಲ್ಲಿ ಸ್ವಚ್ಛತಾ ಕಾರ್ಯ ನಡೆಸಿದರು.
ನಂತರ ವಿದ್ಯಾರ್ಥಿನಿಯರು ಮತದಾನ ಜಾಗೃತಿ ಮೂಡಿಸುವ ರಂಗೋಲಿ ಬಿಡಿಸಿದರು. ಪ್ರಾಚಾರ್ಯ ಡಾ. ಎಸ್.ಟಿ. ಬೋಳರೆಡ್ಡಿ ಮತದಾನ ಜಾಗೃತಿ ಮೂಡಿಸುವ ಘೋಷಣೆ ಕೂಗಿದರು.
ಗ್ರಾಪಂ ಕಾರ್ಯದರ್ಶಿ ಡಿ.ಎಸ್. ತಳವಾರ, ಸಮುದಾಯ ಆರೋಗಾಧಿಕಾರಿ ಸಂತೋಷ ನಡುವಿನಮನಿ, ಪಿ.ಆರ್. ಡೋಣೂರ, ಕಾಜಾಅಮೀನ ವಾಲಿಕಾರ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಮತ್ತಿತರರಿದ್ದರು.