ಜಿಲ್ಲೆ

ಉತ್ಸಾಹದಿಂದ ಯುವ ಮತದಾರರು ಮತ ಚಲಾಯಿಸಿ: ತುಷಾರ್​ ಗಿರಿನಾಥ್​

Webdesk - Manjunatha B

ಬೆಂಗಳೂರು: ಬಿಬಿಎಂಪಿ ವತಿಯಿಂದ ಸೋಮವಾರ ಜಯನಗರ 4ನೇ ಹಂತದಲ್ಲಿರುವ ವಿಜಯ ಕಾಲೇಜಿನಲ್ಲಿ ಮತದಾನ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಪ್ರಜಾಪ್ರಭುತ್ವ ಮತದಾನೋತ್ಸವ ದಿನವಾದ ಮೇ. 10ಕ್ಕೆ ಎಲ್ಲ ಯುವ ಮತದಾರರು ಮತದಾನ ಕೇಂದ್ರಗಳಿಗೆ ತೆರಳಿ ತಪ್ಪದೆ ಮತದಾನ ಮಾಡುವಂತೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕೋರಿದ್ದಾರೆ.

ಜವಾಬ್ದಾರಿ ಅರಿತು ಮತ ಹಾಕಿ

ಮೊದಲ ಬಾರಿ ಮತ ಚಲಾಯಿಸುವವರಲ್ಲಿ ಮತದಾನ ಮಾಡಬೇಕೆಂಬ ಉತ್ಸಾಹ ಇರುತ್ತದೆ. ಮತದಾನ ಮಾಡುವ ಜತೆಗೆ ನರೆಹೊರೆಯವರನ್ನು ಮತದಾನ ಮಾಡಲು ಪ್ರೇರೇಪಿಸಬೇಕು. ಯುವ ಮತದಾರರು ತಮ್ಮ ವಿವೇಚನೆ ಹಾಗೂ ಮಾನದಂಡದ ಪ್ರಕಾರ ಅಭ್ಯರ್ಥಿಗೆ ಮತದಾನ ಮಾಡಬೇಕು. ಒಂದೇ ಒಂದು ಮತವನ್ನು ನಾವು ಕಡೆಗಣಿಸುವಂತಿಲ್ಲ. ಹಾಗಾಗಿ, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಮತ ಹಾಕಬೇಕು.ಬೆಂಗಳೂರು ನಗರದಲ್ಲಿ ಶೇ.52ಗಿಂತ ಕಡಿಮೆ ಮತದಾನವಾಗಿತ್ತು. ಇದನ್ನು ಶೇ.75ಕ್ಕೆ ಹೆಚ್ಚಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತುಷಾರ್ ಗಿರಿನಾಥ್ ವಿವರಿಸಿದ್ಧಾರೆ.

ವಿಶೇಷ ತಂತ್ರಜ್ಞಾನ

ವಾಸಿಸುವ ಸ್ಥಳದಲ್ಲಿ ಏನಾದರೂ ಅಕ್ರಮ ಅಥವಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಸಿ-ವಿಜಿಲ್ ತಂತ್ರಾಂಶದಲ್ಲಿ ಭಾವಚಿತ್ರ ಹಾಗೂ ವೀಡಿಯೋ ಮೂಲಕ ದೂರು ದಾಖಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ತೆರಳಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ದಕ್ಷಿಣ ವಲಯ ಆಯುಕ್ತ ಜಯರಾಮ್ ರಾಯ್​ಪುರ ಹೇಳಿದ್ದಾರೆ.

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಯಿಂದ ಮತದಾನ ಬಗ್ಗೆ ನಾಟಕ ಪ್ರದರ್ಶನ ನಡೆಯಿತು. 500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸ್ವೀಪ್ ಸಮಿತಿ ಅಧ್ಯಕ್ಷ ಸಂಗಪ್ಪ, ವಲಯ ಜಂಟಿ ಆಯುಕ್ತ ಡಾ. ಜಗದೀಶ್ ಕೆ.ನಾಯಕ್ ಮತ್ತಿತರರು ಉಪಸ್ಥಿತರಿದ್ದರು.