ಜಿಲ್ಲೆ

ಮತದಾನ ಜಾಗೃತಿಗೆ ರಾಯಭಾರಿಗಳ ಆಯ್ಕೆ

reportermys

ಮಡಿಕೇರಿ

ಕೊಡಗಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಮತದಾನದ ಪ್ರಮಾಣ ಕಡಿಮೆ ದಾಖಲಾಗಿರುವುದರಿಂದ ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ತಿಳಿಸಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮತದಾನದ ಕೊಡಗು ರಾಯಭಾರಿಗಳನ್ನು ಪರಿಚಯಿಸಿ ಮಾತನಾಡಿದರು.

ಮಡಿಕೇರಿ ರಾಜಾಸೀಟ್‌ನಲ್ಲಿ ಆಯೋಜಿಸಲಾಗಿದ್ದ ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮತದಾನದ ಜಾಗೃತಿ ಸಾರುವ ಪ್ರಚಾರ ಸಾಮಗ್ರಿಗಳನ್ನು ಇಡಲಾಗಿತ್ತು. ಮುಂದೆಯೂ ಪ್ರತಿ ಭಾನುವಾರ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲೂ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನದ ಮಹತ್ವ ಸಾರಲಾಗುವುದು. ಈ ಮೂಲಕ ಮತದಾನದ ಪ್ರಮಾಣ ಹೆಚ್ಚಳಕ್ಕೆ ಪ್ರಯತ್ನ ನಡೆಸಲಾಗುವುದು ಎಂದರು.

೮೦ ವರ್ಷಕ್ಕೂ ಹೆಚ್ಚು ವಯಸ್ಸಿನ ಮತದಾರರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶ ನೀಡಲಾಗಿದೆ. ವಿಕಲಾಂಗ ಚೇತನರು, ಕೋವಿಡ್ ಚಿಕಿತ್ಸೆ ಪಡೆಯುತ್ತಿರುವವರೂ ಈ ಸವಲತ್ತು ಪಡೆದುಕೊಳ್ಳಬಹುದು. ಇಂಥವರಿಗೆ ಫಾರಂ ೨೦ ವಿತರಣೆ ಮಾಡಿ ಅವರವರ ಮನೆಯಿಂದಲೇ ಮತ ಪತ್ರ ಸಂಗ್ರಹಿಸಿ ಇಡಲಾಗುವುದು. ನಂತರ ಪ್ರತ್ಯೇಕವಾಗಿ ಎಣಿಕೆ ಮಾಡಲಾಗುತ್ತದೆ.

ಒಂದು ವೇಳೆ ೮೦ ವರ್ಷ ಮೇಲ್ಪಟ್ಟ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವುದಾದರೆ ಅವರನ್ನು ಮನೆಯಿಂದ ಮತಗಟ್ಟೆಗೆ ಕರೆತಂದು ವಾಪಸ್ ಕರೆದುಕೊಂಡು ಹೋಗಿ ಬಿಡಲಾಗುವುದು. ಹಿರಿಯರು ಮತಗಟ್ಟೆಗೆ ಬಂದರೆ ಕಿರಿಯ ಮತದಾರರಿಗೆ ಸ್ಫೂರ್ತಿ ನೀಡಿದಂತಾಗುತ್ತದೆ. ಮಡಿಕೇರಿ ಕ್ಷೇತ್ರದ ೨೦ನ ಮತ್ತು ವಿರಾಜಪೇಟೆ ಕ್ಷೇತ್ರದ ೪೫ ಮತಗಟ್ಟೆಗಳಲ್ಲಿ ಯುವಕರ ಮತದಾನ ಪ್ರಮಾಣ ಕಡಿಮೆ ಇತ್ತು. ೮೦ ವರ್ಷ ಮೇಲ್ಪಟ್ಟವರು ಮತಗಟ್ಟಗೆ ಆಗಮಿಸಿ ಮತ ಚಲಾಯಿಸುವುದರಿಂದ ಇಂತಹ ಯುವಕರಲ್ಲಿ ಜಾಗೃತಿ ಮೂಡಿದಂತಾಗುತ್ತದೆ.

ಕರ್ತವ್ಯದಲ್ಲಿ ಇರುವವರಿಗೆ ಅಂಚೆ ಮತದಾನದ ವ್ಯವಸ್ಥೆ ಇದ್ದು ಅಗತ್ಯ ಇರುವವರು ಬಳಸಿಕೊಳ್ಳುವಂತೆಯೂ ಜಿಲ್ಲಾಧಿಕಾರಿ ಮನವಿ ಮಾಡಿದರು.
ಜಿ.ಪಂ. ಸಿಇಒ ಡಾ. ಆಕಾಶ್ ಮಾತನಾಡಿ ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ಮೂವರು ರಾಯಭಾರಿಗಳನ್ನು ಗುರುತಿಸಲಾಗಿದೆ. ಸ್ಥಳೀಯವಾಗಿಯೇ ಹೆಸರು ಮಾಡಿರುವ ಪರಿಚಿತರನ್ನೇ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ ಬಾರಿ ಶೇ. ೬೫ಕ್ಕಿಂತಲೂ ಕಡಿಮೆ ಮತದಾನ ಆಗಿತ್ತು. ಈ ಬಾರಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಕ್ರಮ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಾಯಭಾರಿಗಳನ್ನು ಗುರುತಿಸಲಾಗುವುದು ಎಂದರು.
ಮತದಾನದ ರಾಯಭಾರಿಗಳು:

ಈಶ್ವರಿ ಎಸ್.ಕೆ.: ವಿಶೇಷ ಚೇತನ ಮಹಿಳೆ ಆಗಿರುವ ಇವರು ೩೮ ರೀತಿಯ ಕರಕುಶಲ ಕಲೆಗಳಲ್ಲಿ ಪರಿಣಿತಿ ಹೊಂದಿದ್ದಾರೆ. ವ್ಹೀಲ್ ಚೇರ್ ಕ್ರೀಡಾಪಟುವೂ ಹೌದು. ಹಾಡುಗಾರಿಕೆ, ಕವ್ಯವಾಚನ, ನಾಟಕ ರಚನೆಯನ್ನೂ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿರುವ ೪೦೭೪ ಮಂದಿ ವಿಕಲಚೇತನ ಮತದಾರರಿಗೆ ಇವರು ಸ್ಫೂರ್ತಿ ಆಗಿದ್ದಾರೆ..
ಬಸವರಾಜ ಬಡಿಗೇರ್: ಇವರು ೭ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕರು. ಬಾದಾಮಿ ಉತ್ಸವ, ಪಟ್ಟದಕಲ್ಲು ಉತ್ಸವ ಸೇರಿ ಹಲವೆಡೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಸಿದ್ದಾರೆ. ಸಹಪಠ್ಯ ಚಟುವಟಿಕೆಗಳಿಗಾಗಿ ರಾಜ್ಯಮಟ್ಟದ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕೆ. ರವಿ ಮುತ್ತಪ್ಪ: ಕೊಡಗು ಜಿಲ್ಲಾ ಗೃಹರಕ್ಷಕ ದಳದಲ್ಲಿ ೧೩ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ನದಿ ತೊರೆ, ಕೆರೆಗಳಲ್ಲಿ ಬಿದ್ದು ಯಾರೇ ಮೃತಪಟ್ಟರೂ ಇವರು ಬಂದು ನೀರಿನಳದಿಂದ ಶವ ತೆಗೆಯುತ್ತಾರೆ. ಜಿಲ್ಲೆಯಲ್ಲಿ ಮಹಾಮಳೆ ಸಂದರ್ಭ ಇವರ ಸೇವೆ ಸ್ಮರಣೀಯ