ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಮತದಾನದ ಹಕ್ಕು ಪಡೆದ ಪ್ರತೀ ಪ್ರಜೆ ನಿರ್ಭೀತರಾಗಿ, ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಕಡ್ಡಾಯವಾಗಿ ಮತದಾನ ಮಾಡುವದು ಅವಶ್ಯವಾಗಿದೆ, ಪ್ರಜಾಪ್ರಭುತ್ವದ ಉಳಿವಿಗಾಗಿ ಮತದಾಯ ಅತ್ಯವಶ್ಯಕವಾಗಿದ್ದು ಇದರಿಂದ ಯಾರೂ ವಂಚಿತರಾಬಾರದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಮೂರ್ತಿ ಭೋಲಾ ಪಂಡಿತ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಶನಿವಾಋ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ 2024 ರ ಮತದಾರರ ಪಟ್ಟಿ ಪ್ರಕಾರ 27 ಕೋಟಿಯಷ್ಟು ಯುವ ಮತದಾರರು ಇದ್ದಾರೆ. ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ನಮ್ಮ ಒಂದು ಮತದಿಂದ ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಶಕ್ತಿ ಇದೆ. ದೇಶದ ಸರ್ವಾಂಗೀಣ ಪ್ರಗತಿ, ರಕ್ಷಣೆ, ಭದ್ರತೆ ವಿಷಯದಲ್ಲಿ ಮತದಾನ ಪ್ರಮುಖ ಪಾತ್ರ ವಹಿಸಲಿದೆ. ಈ ಹಿನ್ನೆಲೆಯಲ್ಲಿ ಮತ ಚಲಾಯಿಸದೆ ಹಿಂದೆ ಸರಿಯಬಾರದು, ಅತ್ಯಮೂಲ್ಯವಾದ ಹಕ್ಕಿನಿಂದ ವಂಚಿವರಾಗಬಾರದು ಎಂದರು.
ಮತ ಚಲಾಯಿಸಬೇಕು: ಜಿಲ್ಲೆಯ 18 ವರ್ಷ ಮೇಲ್ಪಟ್ಟ ಅರ್ಹ ಪ್ರಜೆಗಳು ಮತದಾರರಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಯಾಗುವ ಜತೆಗೆ ಪ್ರತಿ ಚುನಾವಣೆಯಲ್ಲಿ ಭಾಗಿಯಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಹೇಳಿದರು. ಮತದಾನ ಬಗ್ಗೆ ತಿಳುವಳಿಕೆ, ಜಾಗೃತಿ ನೀಡುವ ಸಲುವಾಗಿ ರಾಷ್ಟ್ರೀಯ ಮತದಾನ ದಿನ ಆಚರಿಸಲಾಗುತ್ತಿದೆ, ಯುವ ಮತದಾರರು ನೋಂದಾಯಿಸಲು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮಟ್ಟದಲ್ಲಿ ಸಾಕಷ್ಟು ಕಾರ್ಯಕ್ರಮ ಮಾಡಲಾಗಿದೆ ಎಂದು ಹೇಳಿದರು. ಮತದಾನವನ್ನು ನಿರ್ಭಿತಿಯಿಂದ ಯಾವುದೇ ಆಮಿಷಕ್ಕೆ ಒಳಗಾಗದೆ ಮತ ಚಲಾವಣೆ ಮಾಡಬೇಕು. ಮತದಾನವನ್ನು ಹಬ್ಬದಂತೆ ಯುವ ಜನತೆ ಉತ್ಸುಕರಾಗಿ ಮತದಾನದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಶಾಲಾ ಮಕ್ಕಳು ತಮ್ಮ ಪಾಲಕರು ಹಾಗೂ ಸುತ್ತಮುತ್ತಲಿನ ಜನರಲ್ಲಿ ಮತ ಚಲಾಯಿಸುವ ಕುರಿತು ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಮತದಾನ ಜವಾಬ್ದಾರಿಯಾಗಿದೆ: ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ಅನುರಾಧಾ ಮಾತನಾಡಿ, ಎಲ್ಲ ಪ್ರಜೆಗಳಿಗೆ ಮತದಾನ ಹಕ್ಕು ಮಾತ್ರವಲ್ಲ, ಅದು ಜವಾಬ್ದಾರಿಯಾಗಿದೆ, ಜಿಲ್ಲೆಯಲ್ಲಿನ 18 ವರ್ಷ ತುಂಬಿದ ಎಲ್ಲ ಪ್ರಜೆಗಳು ಮತದಾರರಾಗಿ ನೊಂದಣಿ ಮಾಡಿಸಿಕೊಂಡು ಮತದಾನ ಮಾಡಬೇಕು. ಪ್ರತಿ ಬಾರಿ ಒಂದೊಂದು ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಆಚರಿಸಲಾಗುತ್ತದೆ. ಈ ಬಾರಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎಂಬ ಧ್ಯೇಯ ವಾಕ್ಯ ನೀಡಲಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ 9.5 ಲಕ್ಷದಷ್ಟು ಮತದಾರರು ಇದ್ದು, ಯುವ ಮತದಾರರು ಹೆಚ್ಚಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು. ಸ್ವೀಪ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಿ ಚುನಾವಣೆಯಲ್ಲಿ ಮತದಾನದ ಪ್ರಮಾಣ ಮತ್ತಷ್ಟು ಹೆಚ್ಚಿಸಲು ಮತದಾರರಲ್ಲಿ ಪ್ರೇರಿಪಿಸಲಾಗುತ್ತಿದೆ. ಜಿಲ್ಲೆಯ ಸ್ವೀಪ್ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ ಎಂದರು.
ಗುರುತಿನ ಚೀಟಿ ವಿತರಣೆ: ಕಾರ್ಯಕ್ರಮದಲ್ಲಿ ಹೊಸದಾಗಿ ನೊಂದಣಿಯಾದ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಮತದಾನದ ಜಾಗೃತಿ ಬಗ್ಗೆ ನಡೆಸಲಾದ ಕಿರುಚಿತ್ರ, ಪ್ರಬಂಧ, ರಸಪ್ರಶ್ನೆ ಸೇರಿ ಸಾಕಷ್ಟು ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರತಿಜ್ಞಾ ವಿಧಿ ಭೋದಿಸಿದರು.