ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಬುಧವಾರದಿಂದ ಬಿಎಲ್ಒ ತಂತ್ರಾಂಶದ ಮೂಲಕ ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿದೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ತಿಳಿಸಿದರು.
ಪ್ರತಿ ವರ್ಷ ಜ.1ಕ್ಕೆ 18 ವರ್ಷ ಪೂರ್ಣಗೊಳಿಸಿದವರನ್ನು ಮತದಾರರ ಪಟ್ಟಿಗೆ ಸೇರಿಸುವ ಕಾರ್ಯ ನಡೆದಿದೆ. ಅದರಂತೆ ಈ ಬಾರಿ ಅ.18ರ ವರೆಗೆ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಅ.29ರಂದು ಮತದಾರರ ಪಟ್ಟಿಯ ಕರಡು ಪ್ರತಿ ಪ್ರಕಟವಾಗಲಿದ್ದು, ಮುಂದಿನ ವರ್ಷ ಜ.6ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಸಂಬಂಧ ಮನೆ-ಮನೆ ಸಮೀಕ್ಷೆ ವೇಳೆ ಬೂತ್ ಮಟ್ಟದಲ್ಲಿ ಹೊಸ ಮನೆಗಳು ಬಂದಿದ್ದರೆ, ಅಲ್ಲಿ ಯಾರಾದರು ಹೊಸಬರು ಬಂದಿದ್ದಾರೋ ಅಥವಾ ಸ್ಥಳದಲ್ಲಿದ್ದವರು ಬೇರೆ ಕಡೆ ಹೋಗಿದ್ದಾರೆಯೆ ಎಂಬ ಮಾಹಿತಿ ಪಡೆದು ಅರ್ಹರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು. ಸ್ಥಳಾಂತರವಾಗಿರುವ ಹಾಗೂ ಮೃತಪಟ್ಟವರ ಅನರ್ಹರನ್ನು ಪಟ್ಟಿಯಿಂದ ತೆಗೆಯಲಾಗುವುದು ಎಂದು ಮುಖ್ಯ ಆಯುಕ್ತರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳಾದ ಸ್ನೇಹಲ್, ಕೆ.ಎ.ದಯಾನಂದ್, ಅವಿನಾಶ್ ಮೆನನ್ ರಾಜೇಂದ್ರನ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಶರಣಪ್ಪ ಇದ್ದರು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ:
ಚುನಾವಣಾ ಆಯೋಗದ ವೋಟರ್ ಹೆಲ್ಪ್ ಲೈನ್ ಮೊಬೈಲ್ ಅಫ್ಲಿಕೇಷನ್ (ವಿಎಚ್‌ಎ) ಮತ್ತು ವೋಟರ್ ಸರ್ವೀಸ್ ಪೋರ್ಟಲ್ (ವೆಬ್ ಅಫ್ಲಿಕೇಷನ್) ಬಳಸಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಾಗರಿಕರಿಗೆ ನೊಂದಣಿಗೆ ಅನುಕೂಲ ಕಲ್ಪಿಸಲು ಮತದಾರರ ಪರಿಷ್ಕೃತ ಪಟ್ಟಿಯನ್ನು ಸಿದ್ದಪಡಿಸಲು 4 ಅರ್ಹತಾ ದಿನಾಂಕ (ಜ.1, ಏ.1, ಜು.1 ಮತ್ತು ಅ.1ರಂದು) ನಿಗದಿಪಡಿಸಲಾಗಿದೆ.
ಮತಗಟ್ಟೆಗಳ ಪರಿಶೀಲನೆ:
ನಗರದಲ್ಲಿ ಸುಮಾರು 9,000 ಮತಗಟ್ಟೆಗಳಿವೆ. ಈ ಮತಗಟ್ಟೆಗಳನ್ನು ಪರಿಶೀಲನೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮತಗಟ್ಟೆಗಳಿಗೆ ಅನುಗುಣವಾಗಿ ಬೂತ್ ಮಟ್ಟದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿರುತ್ತದೆ ಎಂದು ಮುಖ್ಯ ಆಯುಕ್ತರು ತಿಳಿಸಿದ್ದಾರೆ.