ಜಿಲ್ಲೆ

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ

ಶಿವರಾಜ.ಎಂ

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ದೇವನಹಳ್ಳಿ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಸಿದ್ಧಪಡಿಸಲು ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾವಣೆಗೆ ಮೊದಲು ಹೊಸದಾಗಿ ತಯಾರಿಸಬೇಕಾಗಿದ್ದು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಮತದಾರ ಪಟ್ಟಿಯಲ್ಲಿರುವ ಎಲ್ಲ ವ್ಯಕ್ತಿಗಳು ನಿಗದಿತ ನಮೂನೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಭಾರತದ ಪ್ರಜೆಯಾಗಿ ಮತ್ತು ಈ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸಾಮಾನ್ಯ ನಿವಾಸಿಯಾಗಿರಬೇಕು. 2025 ನ.1ಕ್ಕೆ ಮೊದಲು 6 ವರ್ಷ ಅವಧಿಯಲ್ಲಿ ಕನಿಷ್ಠ ಮೂರು ವರ್ಷ ದರ್ಜೆಯಲ್ಲಿ ಪ್ರೌಢಶಾಲೆಗಿಂತ ಕಡಿಮೆ ಇಲ್ಲದ ನಿರ್ದಿಷ್ಟ ಪಡಿಸಿರುವಂತಹ ರಾಜ್ಯದೊಳಗಿನ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನಾ ವೃತ್ತಿಯಲ್ಲಿ ನಿರತರಾಗಿರುವ ಪ್ರತಿ ವ್ಯಕ್ತಿ ಮತದಾರ ಪಟ್ಟಿಯಲ್ಲಿ ಹೆಸರನ್ನು ಸೇರಿಸಲು ಅರ್ಹನಾಗಿರುತ್ತಾನೆ. ಅರ್ಜಿಯನ್ನು ಸಲ್ಲಿಸುವ ದಿನಾಂಕದಂದು ಯಾವುದೇ ವ್ಯಕ್ತಿಯು ಬೋಧನಾ ವೃತ್ತಿಯಲ್ಲಿ ನಿರತನಾಗಿರಲಿ ಪ್ರಮಾಣ ಪತ್ರವನ್ನು ಅಂತಹ ವ್ಯಕ್ತಿಯು ಕೊನೆದಾಗಿ ಸೇವೆ ಸಲ್ಲಿಸಿದ ಸಂಸ್ಥೆಯ ಮುಖ್ಯಸ್ಥರಿಂದ ಸಹಿ ಮಾಡಿರತಕ್ಕದ್ದು ಎಂದು ದೇವನಹಳ್ಳಿ ತಹಸೀಲ್ದಾರ್ ಅನಿಲ್ ದೇವನಹಳ್ಳಿ ತಾಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಮೂಲ ಪ್ರಮಾಣ ಪತ್ರ ಪರಿಶೀಲನೆ: ಖುದ್ದಾಗಿ ಅಥವಾ ಅಂಚೆ ಮೂಲಕ ಒಟ್ಟಾಗಿ ಸಲ್ಲಿಸಿದ ಅರ್ಜಿಗಳನ್ನು ಮತದಾರರ ನೋಂದಣಿ ಅಧಿಕಾರಿಯ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗಿ ಪರಿಗಣಿಸತಕ್ಕದ್ದಲ್ಲ. ಆದರೆ ಸಂಸ್ಥೆಯ ಮುಖ್ಯಸ್ಥರು ಅಥವಾ ಅವರ ಸಿಬ್ಬಂದಿ ಎಲ್ಲ ಅರ್ಜಿಗಳನ್ನು ಒಟ್ಟಾರೆಯಾಗಿ ಸಲ್ಲಿಸಬಹುದು. ಒಂದೇ ಕುಟುಂಬದ ಇತರೆ ಸದಸ್ಯರ ನಮೂನೆ 19 ರ ಅರ್ಜಿಗಳನ್ನು ಕುಟುಂಬದ ಒಬ್ಬ ಸದಸ್ಯರು ಸಲ್ಲಿಸಬಹುದು ಹಾಗೂ ಪ್ರತಿ ಸದಸ್ಯನಿಗೆ ಸಂಬಂಧಿಸಿದಂತೆ ಮೂಲ ಪ್ರಮಾಣ ಪತ್ರಗಳನ್ನು ಪರಿಶೀಲನೆಗೆ ಒಳಪಡಿಸಿ ತಕ್ಕದ್ದು. ನಮೂನೆ 19 ರಲ್ಲಿರುವ ಮುದ್ರಿತ ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿ, ನಿಯೋಜಿತ ಅಧಿಕಾರಿಗಳ ಕಚೇರಿಯಿಂದ ಪಡೆಯಬಹುದು. ಕೈ ಬರಹದ, ಬೆರಳಚ್ಚು ಮಾಡಿದ, ಸೈಕ್ಲೋಸ್ಟೈಲ್(ಕಲ್ಲಚ್ಚು) ಮಾಡಿದ ಅಥವಾ ಖಾಸಗಿಯಾಗಿ ಮುದ್ರಿಸಿದ ನಮೂನೆಗಳನ್ನು ಕೂಡ ಅಂಗೀಕರಿಸಲಾಗುವುದು.

ನ.6ರೊಳಗೆ ಸಲ್ಲಿಸಬೇಕು: ಭರ್ತಿ ಮಾಡಲಾದ ನಮೂನೆ 19 ಅರ್ಜಿಗಳನ್ನು ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಸಹಾಯಕ ಮತದಾನದ ಅಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ನಿಯೋಜಿತ ಅಧಿಕಾರಿಗಳ ಕಚೇರಿಯಲ್ಲಿ ನೀಡಬಹುದು. ಭರ್ತಿ ಮಾಡಲಾದ ಅರ್ಜಿಗಳನ್ನು ನ. 6 ರೊಳಗೆ ಸಲ್ಲಿಸಬೇಕು ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ದೇವನಹಳ್ಳಿ ಅನಿಲ್ ತಿಳಿಸಿದ್ದಾರೆ.