ಜಿಲ್ಲೆ

ಗೊಂದಲಗಳಿಲ್ಲದೆ ಪಟ್ಟಿ ತಯಾರಿಸಿ

Gadag

ಗದಗ: ಜಿಲ್ಲಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ನಿಯೋಜಿತ ಅಧಿಕಾರಿಗಳು ಮತದಾರರ ಪಟ್ಟಿ ಪರಿಷ್ಕರಣೆಯನ್ನು ನಿಖರವಾಗಿ ತಯಾರಿಸುವಂತೆ ಮತದಾರರ ಪಟ್ಟಿ ಜಿಲ್ಲಾ ವೀಕ್ಷಕ ಡಾ.ಎಸ್. ಬಸವರಾಜ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಧಿಕಾರಿಗಳಿಗಿರುವ ಗೊಂದಲಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವ ಮೂಲಕ ಪರಿಹಾರ ಕಂಡುಕೊಂಡು ನಿಖರ ಮತದಾರರ ಪಟ್ಟಿ ಪರಿಷ್ಕರಣೆ ಮಾಡಬೇಕು’. ಜಿಲ್ಲೆಯ ಎಲ್ಲ ಅರ್ಹ ಮತದಾರರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ದೊರೆಯುವಂತೆ ಅವಕಾಶ ಕಲ್ಪಿಸಬೇಕು. ಈ ನಿಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಮುಖವಾಗಿದೆ ಎಂದರು.

ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಒಂದೇ ಪ್ರದೇಶದ ಹಲವರ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಉದಾಹರಣೆಗಳಿವೆ. ಅಲ್ಲದೆ, ವಲಸೆ ಸಂತ್ರಸ್ತರ ಹೆಸರುಗಳು ದಿಢೀರ್ ಮತದಾರರ ಪಟ್ಟಿಯಲ್ಲಿ ನೋಂದಾವಣೆಯಾಗುವುದೂ ಕಂಡುಬರುತ್ತಿದೆ. ಅಂತಹ ಅವ್ಯವಸ್ಥೆಗೆ ಅವಕಾಶ ನೀಡದೇ ನಿಖರ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ಮಾತನಾಡಿ, ವೀಕ್ಷಕರು ಸೂಚಿಸಿದ ಸಲಹೆಗಳನ್ನು ಪಾಲಿಸುವ ಮೂಲಕ ನಿಖರ ಮತದಾರರ ಪಟ್ಟಿ ಪರಿಷ್ಕರಣೆಗೆ ಅಧಿಕಾರಿಗಳು ಶ್ರಮಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಎಲ್ಲ ತಾಲೂಕು ತಹಸೀಲ್ದಾರರು ಇದ್ದರು.

ಒಟ್ಟು 8,62,958 ಮತದಾರರು: ಸಭೆಯಲ್ಲಿ ಮಾಹಿತಿ ನೀಡಿದ ಅಪರ ಜಿಲ್ಲಾಧಿಕಾರಿ ಸತೀಶ ಕುಮಾರ ಮಾತನಾಡಿ, ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ನವೆಂಬರ್ 18ರ ವರೆಗಿನ ಮಾಹಿತಿಯಂತೆ 4,33,675 ಪುರುಷ , 4,29,238 ಮಹಿಳೆಯರು ಹಾಗೂ 45 ಇತರರು ಸೇರಿದಂತೆ ಒಟ್ಟು 8,62,958 ಮತದಾರರಿದ್ದಾರೆ. ನಗರ ಪ್ರದೇಶದಲ್ಲಿ 348 , ಗ್ರಾಮೀಣ ಪ್ರದೇಶದಲ್ಲಿ 611 ಮತಗಟ್ಟೆ ಸೇರಿದಂತೆ ಒಟ್ಟು 959 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 959 ಬಿಎಲ್​ಒಗಳನ್ನು ನೇಮಿಸಿ ಅವರಿಗೆ ತರಬೇತಿ ನೀಡಲಾಗಿದೆ. ಅವರೆಲ್ಲರೂ ಮತದಾರರ ಪಟ್ಟಿ ನಿಖರ ತಯಾರಿಕೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.